Thursday, December 13, 2007

ಹಳೆಯ ಹನಿಗಳು

ಕಾರಣವಿಲ್ಲದೆ
ಮುಖ ತಿರುಗಿಸಿ ಹೋದವಳ
ಹಿಂದೆ ಹೋಗಲು
ಕಾರಣ ಹುಡುಕುತ್ತಿದ್ದೇನೆ

~~~*~~~

ಚಂದ್ರನ ಮೊಗವ ನೋಡಲು
ನನ್ನ ಚಂದ್ರಮುಖಿ ಕಣ್ಣೆತ್ತಲು
ಚಂದ್ರ ಅವಳ ಕಣ್ಮಿಂಚಿಗೆ ನಾಚಿ
ಮೋಡಗಳ ಸೆರಗು ಎಳೆದುಕೊಂಡ

~~~*~~~

ನಾನೇ ಕಟ್ಟಿಕೊಂಡ
ವರ್ತುಲ ಬೇಲಿಯಲ್ಲಿ
ಮೂಲೆಗಳನ್ನ ಹುಡುಕುತ್ತಿದ್ದೇನೆ
ಅವಿತುಕೊಳ್ಳಲು

~~~*~~~
ಅವಳು ಒಂದೇ ಸಮನೆ
ಬಿಕ್ಕುತ್ತಿದ್ದಳು; ಕಾರಣರ್ಯಾರೋ?
ಜಾರುವ ಆ ಕಣ್ಣ ಹನಿಗಳಲ್ಲಿ
ನನ್ನದೇ ಮುಖವಿತ್ತು

(ಕೊನೆಯ ಹನಿಯ ಪದಜೋಡಣೆಯನ್ನು ಸರಿಪಡಿಸಿದ ಸ್ನೇಹಿತನಿಗೆ ಹೃತ್ಪೂರ್ವಕ ವಂದನೆಗಳು)

Monday, December 03, 2007

ನಿಮಗೊಂದಿಷ್ಟು ಪ್ರಶ್ನೆಗಳು

ಮಾನವ ಬೌದ್ಧಿಕ ವಿಕಸನದ ಮೊದಲ ಹೆಜ್ಜೆ ಏನಿರಬಹುದು?
ನ್ಯಾಯ, ಅನ್ಯಾಯ, ನೀತಿ, ನಿಯಮ, ಸತ್ಯ, ಸುಳ್ಳು, ಪ್ರಾಮಾಣಿಕತೆ, ಮೋಸ ಇತ್ಯಾದಿಗಳ ಅರಿವು ಮನುಷ್ಯನಿಗೆ ಮೊದಲ ಸಲ ಹೇಗಾಗಿರಬಹುದು? ಯಾಕಾಗಿರಬಹುದು?

ವಿ.ಸೂ : ಮನಸ್ವಿನಿ ಆರಾಮವಾಗಿದ್ದಾಳೆ :)

Thursday, November 22, 2007

ಕಲ್ಲು ,ಕಲೆ ಮತ್ತು ಅವಳು

ಕಲ್ಲು ಮನಸಿನಲಿ
ಕಲೆಯ ತಂದೇನೆಂದಳು.
ಕಲ್ಲು ಮುಟ್ಟಿದಳು,
ಪರೀಕ್ಷಿಸಿದಳು.
ಕೆತ್ತಿದಳು, ನಕ್ಕಳು.
ಹಿತವೆನಿಸುತ್ತಿತ್ತು ನನಗೂ!
ಮರುಕ್ಷಣ ಏನನ್ನಿಸಿತೋ
ಜೋರಾಗಿ ಹೊಡೆದಳು
ಕೆಡವಿದಳು ಕಲ್ಲಿನಂತ ನನ್ನನ್ನು
ಬಂಡೆಗಲ್ಲಾಗಿದ್ದ ನಾನು
ಈಗ ಚೂರು ಚೂರಾಗಿದ್ದೇನೆ

(ಮತ್ತೊಂದು ಹಳೆಯ ಹಾಡು)

Tuesday, October 23, 2007

ನಿನ್ನ ಕಂಗಳು

ಬಾನೊಳು ಹುಣ್ಣಿಮೆಯ ಚಂದ್ರನಂತೆ
ಅಲ್ಲೇ ಪಕ್ಕದಲ್ಲಿ
ನಗುತ್ತಿವೆ ಚುಕ್ಕಿಗಳಂತೆ
ಸುತ್ತೆಲ್ಲ ಬೆಳದಿಂಗಳ ಹಬ್ಬವಂತೆ
ಇಲ್ಲಿ ಮಿಂಚು ಹುಳುಗಳು
ದೀಪ ಹಿಡಿದು ಹಾರುತ್ತಿವೆಯಂತೆ
ಹಾಗೆನ್ನುತ್ತಿದ್ದಾರೆ ಜನರೆಲ್ಲ
ನನಗೆ ಇದ್ಯಾವ ಕುರುಡುತನ!
ಹಾಂ! ಗೊತ್ತಾಯ್ತು ಬಿಡು
ನಿನ್ನ ಜೋಡಿ ಕಂಗಳಿಲ್ಲಿ ಇಲ್ಲ ನೋಡು
ಅದಕೆ ಬರಿಯ ಕತ್ತಲು
ನಿನ್ನ ಒಂದು ನೋಟ ಸಾಕು
ಬಾಳ ದೀಪ ಬೆಳಗಲು

( ಬಹಳ ಹಿಂದೆ ಬರೆದ ಹಾಡು. ಯಾವ ತಿದ್ದುಪಡಿ ಮಾಡದೆ ಇಲ್ಲಿ ಹಾಕುತ್ತಿದ್ದೇನೆ. )

Tuesday, August 28, 2007

ತಿಳಿದಿರಲಿಲ್ಲ

ಸೆರಗಂಚಿನಿಂದ ಕಣ್ಣೀರ ಒರೆಸಿ
ನಿಮ್ಮ ಪಾದಗಳಿಗೊರಗುವಾಗ
ತಿಳಿದಿರಲಿಲ್ಲ ನನಗಂದು
ಕಡೆಯ ಪುಣ್ಯ ಸ್ಪರ್ಶವೆಂದು

ಮೆಲ್ಲನೆ ನೀವು ಹೊಸ್ತಿಲನು ದಾಟಿ
ಕದ ಹಿಡಿದು ಹಿಂತಿರುಗಿ ನೋಡುವಾಗ
ತಿಳಿದಿರಲಿಲ್ಲ ನನಗಂದು
ಕಡೆಯ ಹೊನ್ನ ದಿನವೆಂದು

ಪಂಚೆಯೆತ್ತಿ ಮೆಟ್ಟಿಲನು ಇಳಿಯುತ್ತ
ಅಂಗಳದ ರಂಗೋಲಿ ನೋಡುವಾಗ
ತಿಳಿದಿರಲಿಲ್ಲ ನನಗಂದು
ಬಣ್ಣದ ಕಡೆಯ ಮೆರುಗೆಂದು

ಮಲ್ಲಿಗೆ ಬಳ್ಳಿಯಿಂದಾರಿಸಿ
ಬಿರಿದ ಮೊಗ್ಗು ನೀವು ಮುಡಿಯಿಲ್ಲಿಡುವಾಗ
ತಿಳಿದಿರಲಿಲ್ಲ ನನಗಂದು
ಬಾಳ ಕಡೆಯ ಕಂಪೆಂದು

ಅಂಗಳವ ದಾಟಿ, ಕೇರಿಯ ದಾರಿಯಲ್ಲಿ
ನೀವು ನಡೆಯುತ್ತ, ತಿರುಗುವಾಗ
ತಿಳಿದಿರಲಿಲ್ಲ ನನಗಂದು
ನಿಮ್ಮ ಕಡೆಯ ನೋಟವೆಂದು

Friday, July 13, 2007

ಏನ್ ಗುರು...ಕಾಫಿ ಆಯ್ತಾ?

ಎಲ್ಲರಿಗೂ ನಮಸ್ಕಾರ,

ಕನ್ನಡ-ಕನ್ನಡಿಗ-ಕರ್ನಾಟಕಗಳ ಬಗ್ಗೆ ಯಾವುದೇ ರೀತಿಯ ಚೌಕಾಸಿಯಿಲ್ಲದೆ ಕನಸುಕಂಡು,ಆ ಕನಸನ್ನು ಹೆಜ್ಜೆಹೆಜ್ಜೆಯಾಗಿ ನನಸು ಮಾಡುತ್ತಿರುವ ವೃತ್ತಿಪರ ಯುವ ಕನ್ನಡಿಗರ ಬಳಗವೇ "ಬನವಾಸಿ ಬಳಗ".

ಕನ್ನಡ, ಕರ್ನಾಟಕ, ಕನ್ನಡಿಗರ ಕುರಿತಾದ ಎಲ್ಲ ವಿಷಯಗಳನ್ನು, ಕನ್ನಡದ ದೃಷ್ಟಿಯಿಂದ ನೋಡಿ, ಕನ್ನಡಿಗರಿಗೆಲ್ಲ ಕನ್ನಡ ದೃಷ್ಟಿಕೋನವನ್ನು ಪರಿಚಯಿಸುತ್ತಿರುವ ಅದ್ಭುತವಾದ ಬ್ಲಾಗ್ ಏನ್ ಗುರು

ಕನ್ನಡಿಗರೆಲ್ಲ ಏನ್ ಗುರು ಬ್ಲಾಗ್ ಓದಿ, ಪ್ರತಿಕ್ರಿಯಿಸಿರಿ.
ಕನ್ನಡ ಬ್ಲಾಗಿಗರೇ, ನಿಮ್ಮ ಬ್ಲಾಗಿನಲ್ಲಿ ’ಏನ್ ಗುರು’ ಕೊಂಡಿಯನ್ನು ಹಾಕಿಕೊಳ್ಳಿ ; ’ಏನ್ ಗುರು’ ಬ್ಲಾಗನ್ನು ಪ್ರೋತ್ಸಾಹಿಸಿ

ತುಂಬಾ ಧನ್ಯವಾದಗಳು.

Saturday, June 02, 2007

ಕೇಳೇ ನನ್ನವ್ವ

ಬೇಲಿ ಮ್ಯಾಲಿನ ಬಳ್ಳಿ
ಬಳ್ಳ್ಯೊಳು ಹೂ ಬೆಳ್ಳಿ
ಸಾಲಾಗಿ ಅರಳಿ ನಿಂತ್ಯಾವ, ನನ್ನವ್ವ
ಕೈಬೀಸಿ ನನ್ನ ಕರೆದಾವ

ಮಣ್ಣಿನ ಮಡಿಕೆಯು
ಬೆಣ್ಣಿಯ ಗಡಗಿಯು
ಬೆರಳಿಡಿದು ನನ್ನ ನಡೆಸ್ಯಾವ, ನನ್ನವ್ವ
ನನ್ ಕೂಡೆ ಭಾರಿ ನಗುತಾವ

ಅಂಕಣದ ಚಪ್ಪರ
ಹರಿದರಿದು ನೋಡ್ಯಾರ
ಚಂದಿರ,ನೂರು ಚುಕ್ಕಿಗಳು, ನನ್ನವ್ವ
ಮನದುಂಬಿ ನನ್ನ ಹರಸಾರ

ಬೆಟ್ಟದ ಮೇಲಿನ
ಕಟ್ಟೆಯ ಕರಿದೇವ
ಕರುಣೆಯ ಕಣ್ಣ ತೆರಕೊಂಡು, ನನ್ನವ್ವ
ಕಾದಾನೆ ನನ್ನ ಕೈಬಿಡದೆ

ಚಿಂತಿಮಾಡತಿ ಯಾಕ?
ನಗ್ತೀನಿ ಇರತನಕ
ಉಸಿರಾಗ ನಿನ್ನ ಹಾಡೈತಿ ,ನನ್ನವ್ವ
ಹಸಿರಾಗತೈತಿ ನನ ಬಾಳ

Friday, May 04, 2007

ಅಮ್ಮನ ಗಾದೆಗಳು

ನಮ್ಮ ಅಮ್ಮ ,ಸೋದರ ಅತ್ತೆ ಉಪಯೋಗಿಸೋ ಕೆಲವು ಗಾದೆಗಳು/ನಾಣ್ಣುಡಿ..ನಾನು ಈ ಗಾದೆಗಳನ್ನೆಲ್ಲ ಅವರ ಬಾಯಲ್ಲೆ ಮೊದ್ಲು ಕೇಳಿದ್ದು . ಗಾದೆ ಉಪಯೋಗಿಸೊ ಸಂದರ್ಭ ಬಂದಾಗೆಲ್ಲ, ಅದೇನೋ ಅಂತಾರಲ್ಲ ಅಂತ ಹೇಳಿ ಆಮೇಲೆ ಗಾದೆ ಹೇಳೋದು ನಮ್ಮ ಅಮ್ಮನ ರೂಢಿ.

೧. ಶೆಟ್ಟಿ ಹತ್ರ ಕಷ್ಟ ಹೇಳ್ಕೊಂಡ್ರೆ,ನಾಲ್ಕಾಣೆ ಇಟ್ಟು ಹೋಗು ಅಂದಿದ್ನಂತೆ ( ಶೆಟ್ರೆಲ್ಲಾ ಬೇಜಾರು ಮಾಡ್ಕೋಬೇಡಿ, ಇದು ಯಾವ ಕಾಲದ್ದೊ! :) )

೨. ತನ್ನ ಬಗುಲಲ್ಲಿ ಆನೆ ಸತ್ರು ಪರ್ವಾಗಿಲ್ಲ,ಬೇರೆಯವ್ರ ತಟ್ಟೆಲಿ ನುಶಿ ಸತ್ತಿದ್ದು ಕಾಣುತ್ತೆ ಇವರಿಗೆ ( ನುಶಿ = ಸೊಳ್ಳೆ)

೩. ಮಾಡೋದು ದುರಾಚಾರ,ಮನೆ ಮುಂದೆ ಬೃಂದಾವನ

೪. ವಾರಗಿತ್ತಿ ಎಂದಿದ್ರೂ ದಾರಿ ಮುಳ್ಳು

೫ ರೋಣಿ ಮಳೆ ಹೊಯ್ದರೆ,ಓಣಿಯೆಲ್ಲಾ ಕೆಸರು

೬. ಸೋಜಿಗದ ಬೆಕ್ಕು ಮಜ್ಜಿಗೆ ಆಮ್ರ ಕುಡಿದಿತ್ತಂತೆ ( ಆಮ್ರದ ಅರ್ಥ ಗೊತ್ತಿಲ್ಲ, ನಮ್ಮ ಅಮ್ಮ ಸಿಟ್ಟು ಬಂದಾಗ ಈ ಗಾದೆ ಹೇಳೊದು ಜಾಸ್ತಿ, ಆಗ ನನ್ನ ಹತ್ರ ಅರ್ಥ ಕೇಳೋಕೆ ಆಗಲ್ಲಪ್ಪ )

೭. ಮುನ್ನೋಡಿ ಪಾಯಸ ಉಣ್ಣೊ ಮೂಳಾ ಅಂದ್ರೆ ಅವ ಯಾವ ಹೊಲದ ಗಸಗಸೆ ಅಂದ್ನಂತೆ

೮. ಹಾಡಿದ್ದೇ ಹಾಡೋ ಕಿಸ್ಬಾಯಿ ದಾಸ

೯. ಮದುವೆಯಾಗೋ ಬ್ರಾಹ್ಮಣ ಅಂದ್ರೆ ನೀನೆ ನನ್ನ ಹೆಂಡತಿ ಅಂದ

೧೦.ನವಿಲು ಕುಣಿಯುತ್ತೆ ಅಂತ ಕೆಂಭೂತ ಕುಣಿಯೋಕಾಗತ್ತ? (ಅಲ್ವಾ ಮತ್ತೆ ?)

೧೧.ಮನೇಲಿ ಗದ್ಲ ಅಂತ ಮಂಜ್ಗುಣಿ ತೇರಿಗೆ ಹೋಗಿದ್ರಂತೆ

೧೨.ಬೇರೆಯವ್ರ ಮನೆ ಎಮ್ಮೆ ಸಗಣಿನೂ ರುಚಿನೆ ಇವ್ರಿಗೆ ( ಯಾರಿಗೆ? ನಂಗೊತ್ತಿಲ್ಲ )

೧೩.ಓಡ್ಹೋಗುವನ ಚಡ್ಡಿ ಹರಕಂಡಷ್ಟೆ ಲಾಭ.

೧೪ ತಾನೂ ತಿನ್ನ,ಪರರಿಗೂ ಕೊಡ.

೧೫ ಆರು ಕೊಟ್ರೆ ಅತ್ತೆ ಕಡೆ,ಮೂರು ಕೊಟ್ರೆ ಮಾವನ ಕಡೆ

೧೬.ಬಡ ದೇವ್ರನ್ನ ಕಂಡ್ರೆ ಬಿಲ್ಪತ್ರೆನೂ ಭುಸ್ ಅನ್ನುತ್ತೆ

Wednesday, April 25, 2007

ಹಾದಿಬದಿಯ ಹೂವು

ಹಾದಿಬದಿಯ ಹೂವು
ಹೆಸರಿಲ್ಲದ ಹೂವು
ಮಡಿಲಲೆ ಹುಟ್ಟಿ ಕರಗುವ ಗಂಧ
ಬಣ್ಣವೋ!ಮಾಸಲು,ಮಂದ
ನಿನ್ನೆ ನಾಳೆಗಳ ಚಿಂತೆ ಇದಕಿಲ್ಲ
ನಗುವುದೊಂದೇ ಧರ್ಮ ದಿನವೆಲ್ಲ
ಸಂಜೆ ಬಾನಿನ ಹೊನ್ನ ಹೊತ್ತಲಿ
ಧಾರಿಣಿಯನಪ್ಪಿದೆ ಮೆಲ್ಲನೆ ಮುತ್ತಲಿ
ಹಾಂ!ಇದು ಹಾದಿ ಬದಿಯ ಹೂವು
ಹೆಸರಿಲ್ಲದ ಹೂವು

Wednesday, April 11, 2007

ಕನಸು

ಕತ್ತಲ ರಾತ್ರಿಯಲಿ,ಹೊದಿಕೆಯ ಒಳಗೆ
ಕಣ್ಣು ಮುಚ್ಚಿ,ನಿದ್ರೆ ಹೋಗಿ
ಕಂಡ ಕನಸುಗಳೆಷ್ಟೊ ;ಹೂವಿನ ಹಾದಿಗಳೆಷ್ಟೊ!
ಬೆಳಗಾಗುವ ಮುನ್ನ,ಕಣ್ಣು ತೆರೆಯುವ ಮುನ್ನ
ಅಳಿಸಿ ಹೋದ,ಹಳಸಿ ಹೋದ
ನವಿರು ಕನಸುಗಳೆಷ್ಟೊ!

ಇಂದಿಲ್ಲಿ ಹಗಲಾಗಿದೆ,ಕಣ್ಣು ತೆರೆದಿದೆ
ಮನದಲ್ಲಿ ಹೊಸತು ಕನಸು
ಹೂವಿನ ಹಾದಿಯೇನಿಲ್ಲ
ಹುರುಪು ತುಂಬಿ,ಛಲವ ಬಿತ್ತಿ
ಮುಂದೆನ್ನ ಕಥೆ ಬರೆಯುವ
ಸರಳ ಕನಸಷ್ಟೆ!

ಅಂದ ಹಾಗೆ ನನ್ನ ಬ್ಲಾಗಿಗೆ ಒಂದು ವರ್ಷವಾಯಿತು. ಉತ್ತೇಜಿಸಿದ,ತಿದ್ದಿದ ,ಪ್ರಶಂಸಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು

Sunday, March 18, 2007

ದಡದಿಂದ ದಡಕೆ

ಕಡಲ ಈ ತೀರದಲಿ
ನನ್ನ ಬೆರೆಳಂಚು,ಉಸುಕಿನಲಿ
ಬರೆದದ್ದೆಲ್ಲಾ ನಿನ್ನ ಹೆಸರೆ
ಸೊಂಯ್ಯನೆ ಹರಿದು ಬರುವ ತೆರೆ
ನಿನ್ನ ಹೆಸರ ಕುಡಿಯೆ,ಎನಗೆ ಅಳುಕಿಲ್ಲ
ಆ ದಡದ ಅಲೆಯಲ್ಲಿ
ಸಿಕ್ಕಿರಬೇಕಲ್ಲಾ,ನಿನಗೆ ನನ್ನ ಒಲವೆಲ್ಲ!

Friday, February 23, 2007

ಅಂದು-ಇಂದು

ಹೊಳೆವ ಹೊಳೆಯ ದಂಡೆಯಲ್ಲಿ
ಅಂದು ನಗುತ ಕುಳಿತೆವಲ್ಲಿ
ಬಾನ ತುಂಬ ಹಕ್ಕಿ ಗುಂಪು
ಗಾಳಿಗಿತ್ತು ಮಧುರ ಕಂಪು
ಮರದ ತುಂಬ ಹೂವ ರಾಶಿ
ಮನದ ತುಂಬ ಒಲಮೆ ಸೂಸಿ
ನಿನಗೆ ನಾನು,ನನಗೆ ನೀನು
ಬರೆದ ಹಾಡು ಭಾವ ಜೇನು
ಇಂದು ಬರಿಯ ಅಕ್ಷರ
ಪ್ರೀತಿ ತಂತೇ ಬೇಸರ?
ಕೆರೆಯ ಹರಿವ ನೀರಾಗಿ
ಮರದ ಬಾಡೋ ಹೂವಾಗಿ
ಒಲವು ಮರೆಯಾಯಿತೆ?
ಇಂದು ಮರೆತು ಹೋಯಿತೆ?

Sunday, February 11, 2007

ಸುವರ್ಣ ಕರ್ನಾಟಕಕ್ಕೆ ಬರೆಗಳು

ಸುವರ್ಣ ಕರ್ನಾಟಕಕ್ಕೆ ಬರೆಗಳು

೧. ಕನ್ನಡ ತಮಿಳಿನಷ್ಟೆ ಹಳೆಯದಾದರು ಶಾಸ್ತ್ರೀಯ ಭಾಷೆಯಲ್ಲ...
೨ ಕಾವೇರಿ ಕನ್ನಡ ನಾಡಿನಲ್ಲೆ ಹುಟ್ಟಿದರೂ ತಮಿಳುನಾಡಿಗೆ ಹೆಚ್ಚಿನ ಪಾಲು

ಬಹುಶ: ನಮಗೆ ಕನ್ನಡಕ್ಕೆ ಜಯವಾಗಲಿ ಅನ್ನುವುದೆ ಗೊತ್ತೆ ಹೊರತು, ಕೇಂದ್ರಕ್ಕೆ ಧಿಕ್ಕಾರ ಅನ್ನುವದು ಗೊತ್ತಿಲ್ಲ. ಅದಕ್ಕೆ ಈ ತರಹದ ಬರೆಗಳು ಆಗಾಗ ಆಗುತ್ತಲೆ ಇವೆ. ಹಿಂದಿಯ ಹೇರಿಕೆಯನ್ನು ವಿರೋಧಿಸಿದ್ದಕ್ಕೆ ತಮಿಳುನಾಡಿಗೆ ಶಾಸ್ತ್ರಿಯ ಭಾಷೆಯ ರಾಜ್ಯದ ಸ್ಥಾನಮಾನವೂ ಸಿಕ್ಕಿದೆ....ಕಾವೇರಿಯ ಹೆಚ್ಚಿನ ಪಾಲು ಕೂಡ.

ನಾವು ಕಾರಣರೆ?
ಹೌದು...ನಮ್ಮ ಶಾಂತ ರೂಪ, ಆಲಸ್ಯ ಎಲ್ಲ ನಮ್ಮನ್ನ ಈ ಸ್ಠಿತಿಗೆ ತಂದಿದೆ.
ಕೇಂದ್ರಕ್ಕೆ ಕನ್ನಡಿಗರ ನಿಜ ಸ್ವರೂಪದ ಪರಿಚಯವಾಗಬೇಕು. ಕೇಂದ್ರದ ಕಿವಿಗೆ ಸ್ವಲ್ಪ ಕಾದ ಎಣ್ಣೆಯನ್ನು ಬಿಡುವ ಹೊತ್ತು ಇದು.
ಕನ್ನಡಿಗರೇ, ಇನ್ನು ಎಷ್ಟು ಹೊತ್ತು ಮಲಗಿರೋಣ!!!ಎದ್ದೇಳಿ.

Wednesday, January 24, 2007

ಹಳೆಯ ದಾರಿ

ಎಲ್ಲೋ ಸಾಗಬೇಕಿದ್ದ ದಾರಿ
ಮತ್ತೆಲ್ಲೋ ತಿರುವ ತೋರಿ
ಹಳೆಯ ದಾರಿಯಿಂದ ಸರಿದು
ತಿರುವ ಸುತ್ತಿ ಮುಂದುವರಿದು
ಬಹು ದೂರ ಬಂದಾಗ
ಹಿಂದೆ ತಿರುಗಿ ನೋಡಿದಾಗ
ಹಳೆಯದೆಲ್ಲ ನೆನಪಾಗಿ
ಮನಸು ಮತ್ತೆ ಭಾರವಾಗೆ
ನಗುತಲೆ ಮುಂದುವರಿವೆ
ಹಳೆಯ ದಾರಿ ಮುಂದೆ
ಮತ್ತೆ ಸಿಕ್ಕೀತೆಂದು

Thursday, January 04, 2007

ಚುಕ್ಕಿಗಳ ನಡುವೆ

ಬೆಳಗಿನಂಗಳದಲ್ಲಿ
ಸಾಲು ಚುಕ್ಕಿಯನಿಟ್ಟು
ರಂಗೋಲಿ ಇಡುವಾಗ
ಮೊದಲ ಚುಕ್ಕಿಗಳಲ್ಲಿ
ಅವನ ಕಣ್ಣು ಮೂಡಿ
ನನ್ನ ನೋಡುವುದೇಕೆ?

ರೇಖೆಯಾಟದಲ್ಲಿ
ಚುಕ್ಕಿಗಳ ಮೇಲೆ
ಇನ್ನೊಂದು ಗೆರೆಯನೆಳೆಯೆ
ಅವನ ತುಟಿಯು ಮೂಡಿ
ನನ್ನ ನಗಿಸುವುದೇಕೆ?

ಇಬ್ಬನಿಯ ಈ ಹೊತ್ತಿನಲಿ
ನಾ ಬರೆದ ಚಿತ್ರದಲಿ
ಅವನ ಚಂದ್ರ ಮುಖ ಮೂಡಿ
ನನ್ನ ಮನದಾಳದಲಿ
ಬೆಳದಿಂಗಳ ತುಂಬುವುದೇಕೆ?