Wednesday, April 25, 2007

ಹಾದಿಬದಿಯ ಹೂವು

ಹಾದಿಬದಿಯ ಹೂವು
ಹೆಸರಿಲ್ಲದ ಹೂವು
ಮಡಿಲಲೆ ಹುಟ್ಟಿ ಕರಗುವ ಗಂಧ
ಬಣ್ಣವೋ!ಮಾಸಲು,ಮಂದ
ನಿನ್ನೆ ನಾಳೆಗಳ ಚಿಂತೆ ಇದಕಿಲ್ಲ
ನಗುವುದೊಂದೇ ಧರ್ಮ ದಿನವೆಲ್ಲ
ಸಂಜೆ ಬಾನಿನ ಹೊನ್ನ ಹೊತ್ತಲಿ
ಧಾರಿಣಿಯನಪ್ಪಿದೆ ಮೆಲ್ಲನೆ ಮುತ್ತಲಿ
ಹಾಂ!ಇದು ಹಾದಿ ಬದಿಯ ಹೂವು
ಹೆಸರಿಲ್ಲದ ಹೂವು

15 comments:

srinivas said...

ಈ ಜಗತ್ತಿನಲ್ಲಿ ಹುಟ್ಟಿ ಸಾಯುವ ಜೀವಿಗಳೆಷ್ಟೋ. ಅವುಗಳಲ್ಲಿ ಹೆಚ್ಚಿನವು ಗಣನೆಗೇ ಬರುವುದಿಲ್ಲ. ಹಾಗೆ ಹಾದಿ ಬದಿಯ ಅನೇಕ ಮುಳ್ಳುಗಿಡಗಳು, ಬೇಲಿಗೆ ಹಾಯಿಸುವ ಕಾಡುಗಿಡಗಳು, ದತ್ತೂರಿಯಂತಹ ಗಿಡಗಳೂ ತಮ್ಮ ತಮ್ಮ ಕರ್ತವ್ಯವನ್ನು ನಿರ್ವಹಿಸಿ, ಜಗತ್ತನ್ನು ಮುಂದೆ ಸಾಗಿಸಲೋಸುಗ ತಮ್ಮ ಸಂತತಿಯನ್ನು ದಯಪಾಲಿಸಿ ಕಣ್ಮರೆಯಾಗುತ್ತವೆ. ನಾಗರಿಕತೆಯ ಮಧ್ಯದಲ್ಲಿ ಬೆಳೆಯುವ ಗಿಡ ಮತ್ತು ಅವುಗಳ ಸಂತತಿ (ಹೂವು, ಹಣ್ಣು, ಬೀಜ ಇತ್ಯಾದಿ) ಪಡೆಯುವ ಮನ್ನಣೆ, ಮಾನ್ಯತೆ - ಆ ಕಾಡು ಮೇಡುಗಳಲ್ಲಿ ಬಂದು ಹೋಗುವ ಗಿಡಗಳು ಮತ್ತು ಅವುಗಳ ಸಂತತಿಗೆ ದೊರಕುವುದಿಲ್ಲ. ಆದರೇನು ಇವುಗಳೂ ಅವುಗಳಂತೆಯೇ ಜಗದೋದ್ಧಾರದ ಕರ್ಮವನ್ನೇ ಮಾಡುತ್ತಿರುವುದಲ್ಲವೇ?

ಬಹಳ ಉನ್ನತ ಮಟ್ಟದ ಚಿಂತನೆಯನ್ನು ಕವನ ರೂಪದಲ್ಲಿ ಹರಿಸಿ, ಹೆಚ್ಚಿನ ಚಿಂತನೆಗೆ ಒತ್ತು ನೀಡಿದುದಕ್ಕೆ ವಂದನೆಗಳು

ಮತ್ತೊಂದು ಸೂಪರ್ ಕವನ ಎಂದು ಹೇಳಿದರೆ, ಅದು ಅತಿಶಯೋಕ್ತಿಯೇನಲ್ಲ.

chethan said...
This comment has been removed by the author.
ಖುಶ್-ಖುಶಿ said...

Short and sweet poem!!!!

SHREE said...

ರದ್ದಿ ಆಯುವ ಹುಡುಗನೊಬ್ಬ ಮಳೆಯ ಪರಿವೆಯಿಲ್ಲದೆ ಹಾದಿಬದಿ ಮಲಗಿ ನಿದ್ರಿಸುತ್ತಿದ್ದುದು ನೋಡಿ,ಇಂದಿನ ಮೊಗ್ಗುಗಳು ನೋಡಿಕೊಳ್ಳುವವರಿಲ್ಲದಿದ್ದಾಗ ನಾಳೆ ಹಾದಿಬದಿಯ ಹೂವುಗಳಾಗಿ ಹೋಗುವ ಸಾಧ್ಯತೆಯ ಬಗ್ಗೆ ಯೋಚಿಸಿ ತಣ್ಣಗಾಗಿದ್ದೆ, ಅದೇ ಸಮಯಕ್ಕೆ ಈ ಕವನ ಓದಿದೆ.. ಅರ್ಥಪೂರ್ಣ...

suptadeepti said...

ಈ ಸಂಜೆಯಷ್ಟೇ ಟಿವಿಯಲ್ಲಿ ಅನಾಥ ಮಕ್ಕಳ ಬಗ್ಗೆ ಕಾರ್ಯಕ್ರಮವೊಂದನ್ನು ನೋಡುತ್ತಿದ್ದೆ, ಈಗ ಈ ಕವನ... ಯೋಚನೆಗೆ ಹಾದಿ ಹಿಡಿಸಿಕೊಟ್ಟಂತೆ. ಕೆಲವೇ ಕೆಲವು ಸಾಲುಗಳಲ್ಲಿ ಗಾಡವಾದ ಹುರುಳು ತುಂಬಿದೆ, ಲೌಕಿಕ-ಅಲೌಕಿಕಗಳ ಚಿಂತನಾ ಮಟ್ಟದಲ್ಲಿ ತೂಗಿದೆ. ಅಭಿನಂದನೆಗಳು

Shiv said...

ಹಾದಿಬದಿಯಲ್ಲಿದ್ದರೂ,ಹೆಸರಿಲ್ಲದಿದ್ದರೂ..ಹೂವು ಹೂವೇ ಅಲ್ವಾ..

ಬೇರೆ ಹೂವುಗಳಿಗಿಂತ ಇದಕ್ಕೆ ಚಿಂತೆ ಇಲ್ಲಾ..ತನ್ನಷ್ಟಕ್ಕೆ ತಾನು ಇದ್ದು ಬಿಡಬಹುದು ಬೇರೆಯವರ ಹಂಗಿಗೆ ಕಾಯದೆ..

chethan said...
This comment has been removed by the author.
Satish said...

'ಮಡಿಲಲೆ ಹುಟ್ಟಿ ಕರಗುವ ಗಂಧ'ದ ಬಗ್ಗೆ ಹಾದಿ ಬದಿಯ ಹೂವಿಗೇನು ಕೊರತೆ ಇಲ್ಲ, ಕೊರಗಿಲ್ಲ ಅಲ್ಲವೇ?

VENU VINOD said...

saraLa sAlugaLu, Adare artHa agAdHa.
sundara kavana

Pramod P T said...

ಬ್ಲಾಗ್-ನ ಎರಡನೇ ವರುಷದ ಮೊದಲ ಕವನ...ತುಂಬಾ ಚೆನ್ನಾಗಿದೆ...ಹೀಗೆ ಮುಂದುವರೆಯಲಿ..

ಪ್ರಮೋದ್

ಮನಸ್ವಿನಿ said...

ಕವನ ಮೆಚ್ಚಿಕೊಂಡಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು

ಖುಶ್-ಖುಶಿ,
ನನ್ನ ಬ್ಲಾಗಿಗೆ ಸ್ವಾಗತ, ಸ್ಪಂದನಕ್ಕೆ ಧನ್ಯವಾದಗಳು

ಸತೀಶ್,
ಹಾದಿಬದಿಯ ಹೂವಿಗೆ ತನ್ನ ಗಂಧದ ಬಗ್ಗೆ ಕೊರಗಿಲ್ಲ

ವೇಣು,
ಏನು ಅರ್ಥ ಆಗಿಲ್ಲ?

ಜಯಂತ್ said...

ತುಂಬಾ ಚೆನ್ನಾಗಿದೆ

ಸಿಂಧು Sindhu said...

ಮನಸ್ವಿನಿ,

ಹಾದಿಬದಿಯ ಹಸಿರುಹುಲ್ಲಿನಲ್ಲಿ ಇಬ್ಬನಿಯಲ್ಲಿ ಮಿಂದು ಪುಟ್ಟಗೆ ನಗುವ ಹೆಸರಿಲ್ಲದ ಹೂವಿನಂತೆ ಚಂದದ ಕವಿತೆ.
'ಹಾದಿಬದಿಯ, ಹೆಸರಿಲ್ಲದ ಹೂವು' ತುಂಬ ಹಿಡಿಸಿತು.

ಯಾರೂ ಸುಳಿಯದ ಹಾದಿಯ ಬದಿಯಲಿ ಮೌನದೊಳಿರುವಳು ಈ ಚೆಲುವೆ.. ಕವಿತೆ ನೆನಪಾಯಿತು. ವಿ.ಸೀ ಯವರ ಕವಿತೆಯೆಂದು ಕಾಣುತ್ತದೆ. ನಿಮಗೆ ನೆನಪಿದೆಯಾ?

ಮನಸ್ವಿನಿ said...

ಜಯಂತ್,

ಧನ್ಯವಾದಗಳು.

ಸಿಂಧು,
ಹಾಡನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.
"ಯಾರೂ ಸುಳಿಯದ ಹಾದಿಯ ಬದಿಯಲಿ ಮೌನದೊಳಿರುವಳು ಈ ಚೆಲುವೆ" - ಈ ಹಾಡು ಓದಿದ ನೆನಪಿಲ್ಲ.ಹಾಡಿನ ಸಾಹಿತ್ಯ ಎಲ್ಲಿ ಸಿಗುತ್ತದೆ ಎಂದು ದಯವಿಟ್ಟು ತಿಳಿಸಿ.

Smiley said...

tumba channagide.manasige aptavaatu