Wednesday, April 23, 2008

ಬೇಸಿಗೆಯ ರಜೆಗಳೆಂದರೆ........

( ನಾನು ಚಿಕ್ಕವಳಿದ್ದಾಗ, ಪ್ರತಿ ಬೇಸಿಗೆ ರಜೆಗೆಂದು ಅಜ್ಜನ ಊರಿಗೆ ಹೋಗುತ್ತಿದ್ದೆ. ಶಿರಸಿಯಿಂದ ಸುಮಾರು ೫-೬ ಮೈಲಿಯ ದೂರದಲ್ಲಿದೆ ಆ ಹಳ್ಳಿ. ಈಗ ಆ ಪುಟ್ಟ ಹಳ್ಳಿಗೆ ಕರೆಂಟೂ ಬಂದಿದೆ, ಟಿ.ವಿಯೂ ಬಂದಿದೆ. ಆ ದಿನಗಳು ಮತ್ತೆ ಮತ್ತೆ ನೆನಪಾಗಿವೆ.)

ಬೇಸಿಗೆಯ ರಜೆಗಳೆಂದರೆ........

ಆರು ಮೈಲಿಯ ದೂರ, ಎರಡು ಕೇರಿಯ ಊರು
ಸುತ್ತೆಲ್ಲ ಹಸಿರು, ಮಧ್ಯೆ ಅಜ್ಜನ ಸೂರು

ಕಡುಬು, ಕಾಯಿ ಚಟ್ನಿ, ರೊಟ್ಟಿಯ ಚೂರು
ಮಿಡಿಯ ಉಪ್ಪಿನಕಾಯಿ, ಗಟ್ಟಿ ಮೊಸರು

ಆಸರಿಗೆ ಮಜ್ಜಿಗೆ , ಪಾನಕ, ಎಳೆನೀರು
ಮಾವು, ಗೇರು, ನೇರಳೆ, ಹೀಗೆ ಹಲವಾರು

ಜಜ್ಜಿದ ಹುಣಸೆ ಕಾಯಿ, ಉಪ್ಪು, ಸ್ವಲ್ಪ ಖಾರ
ಕವಳಿಯ ಮಟ್ಟಿ, ಕೊಟ್ಟಿಗೆಯ ಪುಟ್ಟ ಕರು

ಎಲೆರಾಶಿ ಮೇಲೆ ಚಿತ್ತಾರದ ಹಪ್ಪಳ
ಬಿಸಿಲಲಿ ಒಣಗಿಸಲು ನಿಲ್ಲದ ಜಗಳ

ಉರಿಬಿಸಿಲ ಹೊತ್ತಿನಲಿ ಮಕ್ಕಳ ಹಿಂಡು
ಕಳ್ಳ ಪೋಲಿಸ್, ಲಗೋರಿ, ಚಿನ್ನಿ ದಾಂಡು

ಗೋಧೂಳಿ ಹೊತ್ತಲಿ ಇನ್ನೊಮ್ಮೆ ಸ್ನಾನ
ತಲೆ ಬಾಚಿ, ಜಡೆ ಹೆಣೆದು, ಮುತ್ತ ನೀಡುವ ಅಮ್ಮ

ದೊಡ್ಡ ದೀಪದ ಮುಂದೆ ದೊಡ್ಡ ಸ್ವರದಲಿ ಭಜನೆ
ಅಮ್ಮ, ಅತ್ತೆಮ್ಮನ ಜಾನಪದದ ಮಜವೇ

ಬೀಸುಕಲ್ಲಿನಲಿ ಅಕ್ಕಿಯಾಗಿದೆ ಹಿಟ್ಟು
ಹಿಟ್ಟಲೆ ರಂಗೋಲಿ ಪುಟ್ಟ ಬೆರಳುಗಳಿಟ್ಟು

ಉರಿವ ಚಿಮಣಿಯ ಸುತ್ತ ನಿಲ್ಲದ ಚೇಷ್ಟೆ
ಮಾವನ ಕಣ್ಣುಗಳು ಎಷ್ಟಗಲ ಗೊತ್ತೇ?

ಕರೆಂಟು ಇಲ್ಲದ ಮನೆಯಲಿ, ಎಂಟಕ್ಕೆ ಊಟ
ಒಂಬತ್ತಕ್ಕೆಲ್ಲ ಹಾಗೆ ಹಾಸಿಗೆ ಸಿದ್ಧ

ಕಥೆಗಳ ಜೊತೆಗೆ, ಪಿಸು ಪಿಸು ಮಾತು
ದೊಡ್ಡವರ ಜೋರಿಲ್ಲದೆ ಮಲಗುವುದೆಂತು?

Monday, April 07, 2008

ಬೇಂದ್ರೆ ವೈಭವ

ಸಾಧನಕೇರಿಯ ಮೋಡಿಗಾರ , ನನ್ನ ಅತ್ಯಂತ ಪ್ರೀತಿಯ ಕವಿ 'ಬೇಂದ್ರೆ 'ಅಜ್ಜನ ಸಾಕಷ್ಟು ಕವಿತೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಿ ಸೋತಿರುವಾಗ, ಸುನಾಥ ಕಾಕಾರುಈ ಅದ್ಭುತವಾದ ಬ್ಲಾಗನ್ನು ಬರೆಯುತ್ತಿದ್ದಾರೆ. ಒಂದು ರೀತಿಯಲ್ಲಿ ಬೇಂದ್ರೆ ವೈಭವ. ನಾಕುತಂತಿಯ ಮೇಲೆ ಈಗ ಆಗಲೇ ಎರಡು ಪೋಸ್ಟ್ ಗಳಿವೆ . ಓದಿ, ಪ್ರತಿಕ್ರಿಯಿಸಿ, ಪ್ರೋತ್ಸಾಹಿಸಿ.

ಸುನಾಥ ಕಾಕ, ನಿಮಗೆ ಧನ್ಯವಾದಗಳು.