Friday, May 04, 2007

ಅಮ್ಮನ ಗಾದೆಗಳು

ನಮ್ಮ ಅಮ್ಮ ,ಸೋದರ ಅತ್ತೆ ಉಪಯೋಗಿಸೋ ಕೆಲವು ಗಾದೆಗಳು/ನಾಣ್ಣುಡಿ..ನಾನು ಈ ಗಾದೆಗಳನ್ನೆಲ್ಲ ಅವರ ಬಾಯಲ್ಲೆ ಮೊದ್ಲು ಕೇಳಿದ್ದು . ಗಾದೆ ಉಪಯೋಗಿಸೊ ಸಂದರ್ಭ ಬಂದಾಗೆಲ್ಲ, ಅದೇನೋ ಅಂತಾರಲ್ಲ ಅಂತ ಹೇಳಿ ಆಮೇಲೆ ಗಾದೆ ಹೇಳೋದು ನಮ್ಮ ಅಮ್ಮನ ರೂಢಿ.

೧. ಶೆಟ್ಟಿ ಹತ್ರ ಕಷ್ಟ ಹೇಳ್ಕೊಂಡ್ರೆ,ನಾಲ್ಕಾಣೆ ಇಟ್ಟು ಹೋಗು ಅಂದಿದ್ನಂತೆ ( ಶೆಟ್ರೆಲ್ಲಾ ಬೇಜಾರು ಮಾಡ್ಕೋಬೇಡಿ, ಇದು ಯಾವ ಕಾಲದ್ದೊ! :) )

೨. ತನ್ನ ಬಗುಲಲ್ಲಿ ಆನೆ ಸತ್ರು ಪರ್ವಾಗಿಲ್ಲ,ಬೇರೆಯವ್ರ ತಟ್ಟೆಲಿ ನುಶಿ ಸತ್ತಿದ್ದು ಕಾಣುತ್ತೆ ಇವರಿಗೆ ( ನುಶಿ = ಸೊಳ್ಳೆ)

೩. ಮಾಡೋದು ದುರಾಚಾರ,ಮನೆ ಮುಂದೆ ಬೃಂದಾವನ

೪. ವಾರಗಿತ್ತಿ ಎಂದಿದ್ರೂ ದಾರಿ ಮುಳ್ಳು

೫ ರೋಣಿ ಮಳೆ ಹೊಯ್ದರೆ,ಓಣಿಯೆಲ್ಲಾ ಕೆಸರು

೬. ಸೋಜಿಗದ ಬೆಕ್ಕು ಮಜ್ಜಿಗೆ ಆಮ್ರ ಕುಡಿದಿತ್ತಂತೆ ( ಆಮ್ರದ ಅರ್ಥ ಗೊತ್ತಿಲ್ಲ, ನಮ್ಮ ಅಮ್ಮ ಸಿಟ್ಟು ಬಂದಾಗ ಈ ಗಾದೆ ಹೇಳೊದು ಜಾಸ್ತಿ, ಆಗ ನನ್ನ ಹತ್ರ ಅರ್ಥ ಕೇಳೋಕೆ ಆಗಲ್ಲಪ್ಪ )

೭. ಮುನ್ನೋಡಿ ಪಾಯಸ ಉಣ್ಣೊ ಮೂಳಾ ಅಂದ್ರೆ ಅವ ಯಾವ ಹೊಲದ ಗಸಗಸೆ ಅಂದ್ನಂತೆ

೮. ಹಾಡಿದ್ದೇ ಹಾಡೋ ಕಿಸ್ಬಾಯಿ ದಾಸ

೯. ಮದುವೆಯಾಗೋ ಬ್ರಾಹ್ಮಣ ಅಂದ್ರೆ ನೀನೆ ನನ್ನ ಹೆಂಡತಿ ಅಂದ

೧೦.ನವಿಲು ಕುಣಿಯುತ್ತೆ ಅಂತ ಕೆಂಭೂತ ಕುಣಿಯೋಕಾಗತ್ತ? (ಅಲ್ವಾ ಮತ್ತೆ ?)

೧೧.ಮನೇಲಿ ಗದ್ಲ ಅಂತ ಮಂಜ್ಗುಣಿ ತೇರಿಗೆ ಹೋಗಿದ್ರಂತೆ

೧೨.ಬೇರೆಯವ್ರ ಮನೆ ಎಮ್ಮೆ ಸಗಣಿನೂ ರುಚಿನೆ ಇವ್ರಿಗೆ ( ಯಾರಿಗೆ? ನಂಗೊತ್ತಿಲ್ಲ )

೧೩.ಓಡ್ಹೋಗುವನ ಚಡ್ಡಿ ಹರಕಂಡಷ್ಟೆ ಲಾಭ.

೧೪ ತಾನೂ ತಿನ್ನ,ಪರರಿಗೂ ಕೊಡ.

೧೫ ಆರು ಕೊಟ್ರೆ ಅತ್ತೆ ಕಡೆ,ಮೂರು ಕೊಟ್ರೆ ಮಾವನ ಕಡೆ

೧೬.ಬಡ ದೇವ್ರನ್ನ ಕಂಡ್ರೆ ಬಿಲ್ಪತ್ರೆನೂ ಭುಸ್ ಅನ್ನುತ್ತೆ