Monday, December 18, 2006

ನೀನೊಮ್ಮೆ ನನ್ನ ನೋಡಬಾರದೇ?

(ಆತನ ಹಂಬಲ)

ಕೇರಿಯ ಗೆಳತಿಯರೊಂದಿಗೆ ನಗುತ
ಕೊಡಪಾನವ ಹೊತ್ತು
ಬಾವಿಕಟ್ಟೆಗೆ ಬಂದು
ಮತ್ತೆ ನಗುತಲೆ
ಬಂಡಿಗೆ ಹಗ್ಗವ ಹಾಕಿ
ಕೊಡದ ಕುತ್ತಿಗೆಗೆ ನುಣಿಕೆಯ ಕಟ್ಟುತ್ತ
ನೀರೊಳಗೆ ಕೊಡವ ಬಿಟ್ಟು
ಏನನ್ನೋ ಹೇಳಿ ನಗುವಳು
ಹಗ್ಗವ ಎತ್ತಿ, ಬಿಡುತ್ತ
ನೀರು ತುಂಬಿತೇ? ಎಂದು ನೋಡುವಳು
ತುಂಬಿದ ಕೊಡವನೆತ್ತಿ
ಸೊಂಟದ ಮೇಲೆ ಇಡುತ್ತ
ಮನೆಯತ್ತ ಸಾಗುವಳು
ಆಯಿತೇನೆ? ಎಂದು ಗುಂಪಿನಿಂದ ಕೂಗಿದರೆ
ಇನ್ನೊಂದು ದಾರಿ ಎಂದು ಅವಳನ್ನಲು
ಅಬ್ಬ ಎನ್ನುವುದು ನನ್ನೆದೆ
ಇಲ್ಲೆ ನಿಂತಿರುವೆ,ಇಲ್ಲೆ ನಿಲ್ಲುವೆ
ನಿನ್ನ ದಾರಿಗಳು ಮುಗಿಯುವವರೆಗೂ
ನೀನೊಮ್ಮೆ ನನ್ನ ನೋಡಬಾರದೇ?


ದಾರಿ= ಸರತಿ, ಸಲ
ಕೊಡಪಾನ= ಕೊಡ

Thursday, December 07, 2006

ಮಲ್ಲಿಗೆಯ ಕಂಪು

ಮಡಿಲಲ್ಲಿ ಮಲ್ಲಿಗೆಯ ತುಂಬಿ
ದಂಡೆಯನು ಹೆಣೆಯುತ್ತ
ನಸು ನಗುತಿಹಳು ತನ್ನಷ್ಟಕ್ಕೆ ತಾನೆ
ಏನನ್ನೋ ನೆನೆ ನೆನೆದು
ಅವಳಲ್ಲೂ ಅರಳಿರಬೇಕು ಒಲವಿನ ಮಲ್ಲಿಗೆ
ತುಂಬಿರಬೇಕು! ಅವಳೆದೆಯ ಮಲ್ಲಿಗೆಯ ಕಂಪು

Monday, December 04, 2006

ಸುಮ್ಮನೆ

ಭಾವಗಳು ಕಟ್ಟೆಯೊಡೆದು
ಕಣ್ಣಲ್ಲಿ ಹನಿ ಮೂಡಿದಾಗ
ಮಳೆ ನೀ ಇಳೆಗೆ ಇಳಿದು
ಕಣ್ಣೀರ ಒರೆಸಿದರೆ
ಕಣ್ಣು ತೋಯ್ದದಷ್ಟೆ ಲೋಕದ ಕಣ್ಣಿಗೆ
ಮನಸ್ಸು ತೋಯ್ದದ್ದು ನನ್ನ ಮನಸ್ಸಿಗೆ

Tuesday, October 31, 2006

ಸುವರ್ಣ ಕನ್ನಡ ರಾಜ್ಯೋತ್ಸವ

ಸುವರ್ಣ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಐವತ್ತು ವಸಂತಗಳಾದವು
ಲೆಕ್ಕವಿಲ್ಲದಷ್ಟು ದೀಪಗಳು ಹೊತ್ತಿದವು
ವಿಶ್ವಕ್ಕೆಲ್ಲ ಬೆಳಕು
ಶಿಖರದೆತ್ತರದ ಹೆಸರು
ಏನಾದರೇನು?
ಒಂದಿಷ್ಟು ಅರಿಶಿಣ, ಒಂದಿಷ್ಟು ಕುಂಕುಮ
ಮೂಡಬೇಕು ಅಸಂಖ್ಯ ಕನ್ನಡ ಮನಗಳಲ್ಲಿ


ಈ ಶುಭ ಉತ್ಸವದಲ್ಲಿ ನಮ್ಮ ಮನಗಳಲ್ಲಿ ಕನ್ನಡದ ದೀಪ ಹೊತ್ತಿಸೋಣ, ಕನ್ನಡದ ಬಾವುಟ ಏರಿಸಿ ಹಾರಿಸೋಣ.

Friday, October 13, 2006

ಹೀಗೊಂದು ಮಳೆ

ಮನಸ ತುಂಬಾ ಹುಚ್ಚು ಕಾರ್ಮೋಡ
ಅದೋ ಸುರಿಯುತಿದೆ
ಮೊದಲು ಹನಿಯಾಗಿ
ಮತ್ತೆ ಜೋರಾಗಿ
ನೆನಪಿನ ಮಳೆ
ಮನವನ್ನು ನೆನೆಸುತ್ತ, ತಣಿಸುತ್ತ
ಹನಿವ ಹನಿಗಳೆಲ್ಲ ಕಣ್ಣ ಮುಂದೆ ಹನಿದು
ಕಾಲ ಗರ್ಭದಲ್ಲಿ ಮತ್ತೆ ಹುದುಗುತ್ತ
ಮಳೆ ನಿಲ್ಲುವುದು,ಮತ್ತೆ ಮೋಡ ಕವಿಯುವವರೆಗೆ

(ನೆನಪಿನ ಮಳೆ ಮನಸ್ಸನ್ನ ಸ್ವಲ್ಪ ತಣಿಸುತ್ತೆ, ಸ್ವಲ್ಪ ತೋಯಿಸುತ್ತೆ...ಏನಂತೀರ?)

Monday, September 25, 2006

ಹನಿಯ ಮುತ್ತು

ಕಣ್ಣಿಂದ ಕಣ್ಣೀರು ಹರಿ ಹರಿದು
ಹನಿಯಾಗಿ ಒಡೆದೊಡೆದು
ಜಾರುತಿರಲು
ಹನಿಯೊಂದು ಕೆನ್ನೆಯನಪ್ಪಿ
ಮೃದುವಾಗಿ ಮುತ್ತಿಕ್ಕಿ
ನಗು ಎಂದಿದೆ

Monday, September 11, 2006

ನೋಡಿ ಸ್ವಾಮಿ ನಾನಿರೋದೆ ಹೀಗೆ!

'ಬೆಂಗಳೂರು ಕನ್ನಡಿಗರ ಸ್ವತ್ತು. ಇಲ್ಲಿ ಯಾರ ಸೊಕ್ಕು ನಡೆಯುವುದಿಲ್ಲ, ಅದೂ ನನ್ನ ಮುಂದೆ' ಅಂತ ದಬಾಯಿಸ್ತಾ ಇದ್ದೆ ಒಬ್ಬ ಕೊಂಗನನ್ನ. ಹಾಗೆ ಮಾತನಾಡುತ್ತಿದ್ದಂತೆ ನನ್ನ ಕನ್ನಡ ಮಿತ್ರರೆಲ್ಲ ನನ್ನನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದರು. ಅವರ ಮುಖದಲ್ಲಿ ನನಗಾಗಿ ಬೇಕಾದಷ್ಟು ಪ್ರಶ್ನೆಗಳಿದ್ದವು. ಕೆಲವರಂತು ಇದೆಲ್ಲ ಬೇಕಾ? ಯಾಕೆ ಜಗಳಗಂಟಿ ಆಗಿ ಬಿಟ್ಟಿದ್ದೀಯಾ? ಅನ್ನೋಕೆ ಶುರು ಮಾಡಿದ್ರು. ನಾನು ಅರೆರೆ! ಇವತ್ತು ಹೀಗೆ ಇವ್ನು ಮಾತಡ್ತಾನೆ, ನಾಳೆ ಇನ್ನೊಬ್ಬ. ಸುಮ್ನೆ ಇರಿ ಎಲ್ಲ. ಇವ್ರಿಗೆ ಅಲ್ಲಲ್ಲೆ ಪಾಠ ಕಲ್ಸಬೇಕು. ಎನ್ ಬೆಂಗಳೂರು ಇವರ ಅಪ್ಪಂದ ಅಂತ ಕೇಳ್ದೆ. ಆ ಕೊಂಗ ಸುಮ್ಮನಾದ, ನನ್ನ ಮಿತ್ರರಲ್ಲ. ನೀನು ಕೋಳಿ ಜಗಳ ಶುರು ಮಾಡ್ಬೇಡ. ನಾನು ಏನೂ ಮಾತನಾಡಲಿಲ್ಲ, ಸುಮ್ಮನೆ ಬಂದೆ. ನನ್ನ ಉದ್ದೇಶ ಇಷ್ಟೆ ಆಗಿತ್ತು... 'ನೋಡಿ ಸ್ವಾಮಿ ನಾನಿರೋದೆ ಹೀಗೆ! adjust ಮಾಡ್ಕೊಳೊಕೆ ನನ್ನಿಂದ ಆಗೊಲ್ಲ ...ಅದೂ ಕನ್ನಡದ ವಿಷ್ಯದಲ್ಲಿ'


ಕನ್ನಡದ ಬಗ್ಗೆ ವಿಷಯ ಬಂದಾಗೆಲ್ಲ ನನ್ನ ಮೈ ರೋಮ ರೋಮ ಸೆಟೆದು ನಿಲ್ಲುತ್ತೆ. ಅದೂ ಹೆಚ್ಚ್ಚು ಕಮ್ಮಿ ಮಾತಾಡಿದ್ರೆ ಸುಮ್ನೆ ಇರೊಳಲ್ಲ ನಾನು. ನನ್ನ ಮಿತ್ರರೆಲ್ಲ ನಂಗೆ ' ನೀನು ಬಿಡಮ್ಮ, ಕನ್ನಡ ಅಭಿಮಾನಿ' ಅನ್ನೋಕೆ ಶುರು ಮಾಡಿದ್ರು. ಹೌದು ನಾನು , ನಿಮಗೆಲ್ಲ ಎನೂ ಅನ್ನೊಸೊಲ್ವ? ನಿಮ್ಮ ಅಮ್ಮನ್ನ ಬೈದ್ರೆ ಸುಮ್ಮನೆ ಬರ್ತೀರಾ? ಅಷ್ಟೆ ನನ್ನ ಪ್ರಶ್ನೆ 'ನೋಡಿ ಸ್ವಾಮಿ ನಾನಿರೋದೆ ಹೀಗೆ! adjust ಮಾಡ್ಕೊಳೊಕೆ ನನ್ನಿಂದ ಆಗೊಲ್ಲ ...ಅದೂ ಕನ್ನಡದ ವಿಷ್ಯದಲ್ಲಿ'

ನೋಡು , ಇವತ್ತು ನಾವೆಲ್ಲ forumಗೆ ಹೋಗೋಣ, ನೀನು ತರ್ಲೆ ಶುರು ಮಾಡ್ಬೇಡ ಅಂದ ನನ್ನ ಗೆಳತಿನ 'ನೋಡಮ್ಮ , ಬೆಂಗಳೂರು forumಗೆ ತಾನೆ ಹೋಗೊದು, ಮತ್ತೇನು ತರ್ಲೆ ಬಂತು. ನಂಗಿರೋದು ಒಂದೆ ವ್ಯಕ್ತಿತ್ತ್ವ, ನಂಗಿರೋದು ಒಂದೆ ಆತ್ಮ. ನಂಗಿರೋಳು ಒಬ್ಳೆ ಅಮ್ಮ, ಬೇರೆ ಬೇರೆ ಮುಖ್ವಾಡ ಹಾಕಿಕೊಂಡು ತಿರುಗೋಕೆ ಆಗೊಲ್ಲ' 'ನೋಡಿ ಸ್ವಾಮಿ ನಾನಿರೋದೆ ಹೀಗೆ! adjust ಮಾಡ್ಕೊಳೊಕೆ ನನ್ನಿಂದ ಆಗೊಲ್ಲ ...ಅದೂ ಕನ್ನಡದ ವಿಷ್ಯದಲ್ಲಿ'

೪ ಜನ ಉತ್ತರ ಭಾರತೀಯರಿದ್ದ ಮಾತ್ರಕ್ಕೆ ಹಿಂದಿ ಶುರು ಮಾಡ್ಕೊಳೋದ್ರಲ್ಲಿ ಎನರ್ಥ? ಕರ್ನಾಟಕಕ್ಕೆ ಬಂದು ಎಷ್ಟು ದಿನಗಳಾದ್ವು? ತೀರ ಹೊಸಬರು ಆದ್ರೆ, englishನಲ್ಲಿ ಮಾತಾಡ್ತೀನಿ. ಅದೂ ಒಂದು ತಿಂಗಳು ಮಾತ್ರ, ಆಮೇಲೆ ಅದೆ ಮುಖ ಸಿಕ್ಕಿದ್ರೆ, ನನ್ನ ಬೈಬೆಡಿ 'ನೋಡಿ ಸ್ವಾಮಿ ನಾನಿರೋದೆ ಹೀಗೆ! adjust ಮಾಡ್ಕೊಳೊಕೆ ನನ್ನಿಂದ ಆಗೊಲ್ಲ ...ಅದೂ ಕನ್ನಡದ ವಿಷ್ಯದಲ್ಲಿ'


ಸಾರಾಂಶ : 'ನೋಡಿ ಸ್ವಾಮಿ ನಾನಿರೋದೆ ಹೀಗೆ! adjust ಮಾಡ್ಕೊಳೊಕೆ ನನ್ನಿಂದ ಆಗೊಲ್ಲ ...ಅದೂ ಕನ್ನಡದ ವಿಷ್ಯದಲ್ಲಿ' :)

Friday, September 01, 2006

ಕಾಲದ ಹೊಳೆ

ಕಾಲದ ಹೊಳೆಯು ಹರಿಯುತಿದೆ
ಒಂದೇ ಸಮನೆ
ದಿನ ರಾತ್ರಿಗಳ ಹೊತ್ತು
ಅದೆಂದಿನಿಂದ ಅದೆಲ್ಲಿಯವರೆಗೊ!
ಕಾಲ ಸಾಗರನ ಸೇರಲು
ಯಾವ ಒಡ್ಡು ಒಡ್ಡಬಲ್ಲೆ?
ಹೇಗೆ ಎದಿರು ನಿಲ್ಲಬಲ್ಲೆ?
ಈಜಬೇಕಷ್ಟೆ ಅದರ ಜೊತೆಗೆ
ತ್ರಾಣವಿರುವವರೆಗೆ
ಪ್ರಾಣವಿರುವವರೆಗೆ

Wednesday, August 23, 2006

ಒಗಟುಗಳು-ಉತ್ತರ ಸಮೇತ

೧. ಕಾನಾಗೆ ಕಡ್ಲೆ ಬಿತ್ತಿ
ಗರಿ ಬೇಲಿ ಕಟ್ಟಿ
ರಾಮ ರಾಮ ಅನ್ನೊ ಹುಡುಗನ್ನ ಕಾವಲಿಗೆ ಬಿಟ್ಟಿದ್ರಂತೆ!
ಉತ್ತರ:ಕಣ್ಣು

೨. ಮೇಲಿನ ಮನೆ ಮುದುಕಿ
ಕೆಳಗಿನ ಮನೆ ಮುದುಕಿ
ಜಿಬ್ಬು ಜಿಬ್ಬಿನಲ್ಲಿ ಹೊಡೆದಾಡತಾರಂತೆ
(ಜಿಬ್ಬು = ಸಣ್ಣ ಕಟ್ಟಿಗೆ ಚೂರು )
ಉತ್ತರ: ಕಣ್ಣಿನ ರೆಪ್ಪೆಗಳು

೩. ಅಯ್ಯಪ್ಪನ ಕುದುರೆಗೆ ಮೈಯೆಲ್ಲಾ ಗಾಯ
ಉತ್ತರ: ಕೌದಿ ( ಬಟ್ಟೆ ಚೂರುಗಳಿಂದ ಹೊಲೆದು ಮಾಡಿರುವ ಹೊದಿಕೆ, ಚಾದರ)

೪. ಬಿಳಿ ಕುದುರೆ ಬೇಲಿ ಹಾರ್ತತಿ
ಉತ್ತರ:ಬೂದಿ

೫. ಗುದ್ದನಲ್ಲಿ ಇರೊ ಬಸಪ್ಪ
ಎದ್ದು ಎದ್ದು ನೋಡ್ತಾನ
(ಗುದ್ದು= ಹೊಂಡ )
ಉತ್ತರ: ಒಲೆಯಲ್ಲಿ ಒಡ್ಡಿರುವ ಬೆಂಕಿ

೬. ಆ ಕಲ್ಲು , ಈ ಕಲ್ಲು ನಡುವೆ ಮತ್ತೊಂದು ಕಲ್ಲು
ಆ ಕಲ್ಲು ಮುಳುಗಿದರೆ ಲೋಕವೆಲ್ಲ ಹಾಳು
ಉತ್ತರ: ಬೆಣ್ಣೆ

೭. ಬಿಳಿ ಗದ್ದೆ ಮೇಲೆ , ಕರಿ ಕಡ್ಲೆ ಬಿತ್ತಿ
ಬಾಯಗೆ ಒಂದೊಂದೆ ಆರಿಸಬೇಕು
ಉತ್ತರ:ಬಿಳಿ ಹಾಳೆ, ಕಪ್ಪು ಅಕ್ಷರಗಳು

೮ ಮಳೆ ಜಳ್ಳು
ಮಾಣಿಕ್ಯದ ಹರಳು
ಮಾತ ಸುಳ್ಳು
( ಒಂದೊಂದು ಸಾಲಿಗೆ ಒಂದೊಂದು ಉತ್ತರ)
ಉತ್ತರ:
ಇಬ್ಬನಿ
ಆಣೆಕಲ್ಲು
ಕನಸು


೯. ಕೊಕ್ಕರೆ ಕೂರ್ತತಿ
ಕೆರೆನೀರು ಆರ್ತತಿ
ಉತ್ತರ:
ಬತ್ತಿ
ಎಣ್ಣೆ


೧೦. ಬೆಳ್ಳಿ ಸರಪಳಿ ತೆಗೆಯೊಕೆ ಬರ್ತತಿ
ಹಾಕಕೆ ಬರೊಲ್ಲ
ಉತ್ತರ:
ಕರೆಯುತ್ತಿರುವ ಹಾಲು


೧೧ ಒಂದು ಅಂಗಳಕ್ಕೆ ಒಂದೇ ಕಂಬ
ಉತ್ತರ:
ಛತ್ರಿ

ಉತ್ತರಗಳಿಗೆ ವಿವರಣೆ ಬೇಕಿದ್ದಲ್ಲಿ ನನಗೆ ತಿಳಿಸಿ :)

Tuesday, August 01, 2006

ಶಾಲ್ಮಲಿ

ಪ್ರೀತಿಯ ಸಾಧನಾ,

ಹೇಗಿದ್ದಿಯಾ? ನಾನಿಲ್ಲಿ ಆರಾಮವಾಗಿದ್ದೇನೆ. ನಿಂಗೆ ಪತ್ರ ಬರಿದೆ ಇದ್ದುದಕ್ಕೆ ಸಾರಿ. ಪಾಪು ನೋಡ್ಕೊಳೊದ್ರಲ್ಲೆ ಸಮಯ ಆಗಿ ಹೋಗುತ್ತೆ.
ನಿಂಗೆ ಗೊತ್ತಲ್ಲ .ಜೀವನ್ ಕಥೆ. ೨-೩ ತಿಂಗಳಿಂದ ಮನೆಗೆ ಬಂದಿರ್ಲಿಲ್ಲ. ನನ್ನ ಜೀವನದಲ್ಲಿ ಎಲ್ಲ ಮುಗಿದು ಹೋಯ್ತು ಅಂತ ಅಳೋದು ಒಂದೆ ಆಗಿತ್ತು. ಮನೆಲಿ ಯಾರು ಮಾತೆ ಆಡ್ತಿರ್ಲಿಲ್ಲ. ಸ್ಮಶಾನ ಮೌನ. ನಾನಂತು ಹಾಸಿಗೆ ಮೇಲೆ, ಚಾದರದ ಒಳಗೆ ಲೋಕ ಮಾಡ್ಕೂಂಡು ಅಳೋದನ್ನ ಆಸ್ತಿ ಮಾಡ್ಕೊಂಡಿದ್ದೆ. ಅಲ್ಲಿ ಇಲ್ಲಿ ಸ್ವಲ್ಪ ಧೈರ್ಯ ಮಾಡಿ ಜೀವನ ನಡಿತಿತ್ತು ಅದರ ಪಾಡಿಗೆ ಅದು. ಒಂದು ದಿನ ಮಾವ ಬಂದು ನನ್ನ ಮುಂದೆ ಗೊಳೊ ಅಂತ ಅತ್ರು. 'ಶಾಲು, ನಿನ್ನ ಜೀವನ ಅಮವಾಸ್ಯೆ ಆಗಿ ಹೊಯ್ತಲ್ಲ, ನನ್ನ ಮಗ ಬೇಕಾ ಬಿಟ್ಟಿ ಏನೇನೊ ಅಭ್ಯಾಸ ಮಾಡ್ಕೊಂಡ' ಅಂದ್ರು. ಅದೆಲ್ಲಿ ಧೈರ್ಯ ಬಂತೊ ಗೊತ್ತಿಲ್ಲ ಸಾಧು,ಪಾಪುನ ಕರ್ಕೊಂಡು ಬಂದು, ಅವರ ಕೈಯಲ್ಲಿ ಹಾಕಿ, ' ಮಾವ, ಪೂರ್ಣ ಚಂದ್ರ ಇದ್ದಾಗ, ಅಮವಾಸ್ಯೆ ಎಲ್ಲಿ ಅಂದೆ, ಮಾವ, ನಾವು ಜೀವನನ ಇಷ್ಟೇನಾ ಕಂಡಿರೋದು....ಬದುಕ ಬೇಕು, ನಮ್ಮ ಆದ್ಯತೆಗಳನ್ನ ನಾವೇ ಮಾಡ್ಕೊಬೇಕು ಅಂದೆ' ಅವ್ರು ಅದಕ್ಕೆ, ನಂದೇನಿದೆ!! ೬೦ ಆಯ್ತಲ್ಲ ...ಅರಳು ಮರಳು ಅಂದ್ರು. ನಾನು ' ೬೦- ಅರಳು, ಮರಳು ಅಲ್ಲ...೬೦ಕ್ಕೆ ಮರಳಿ ಅರಳು ಅಂದೆ' . 'ಏನಿದು, ನನ್ನ ಮಗಳು ಇವತ್ತು ಬುದ್ಧಿವಂತೆ ಆಗಿದ್ದಾಳೆ' ಅಂದ್ರು. ನಾನು ' ನಮ್ಮ ಬೇಂದ್ರೆ ಮಾಸ್ತರ್ದು' ಅಂದೆ. ಅವತ್ತಿಂದ ನಾವು ಹೊಸ ಜೀವನ ಶುರು ಮಾಡಿದ್ದೀವಿ.

ಮಾವ ಮತ್ತೆ ಕೆಲ್ಸಕ್ಕೆ ಸೇರಿಕೊಂಡಿದ್ದಾರೆ. ಅತ್ತೆ ಸುಧಾರಿಸಿ ಕೊಂಡಿದ್ದಾರೆ. ನಾನು ಕೆಲ್ಸಕ್ಕೆ ಹೋಗ್ತಿದ್ದೀನಿ. ಮಾವಯ್ಯಂಗೆ ಬೇಂದ್ರೆ ಮಾಸ್ತರ ಹುಚ್ಚು ಈಗ. ಮೊನ್ನೆ ' ನಾಕು ತಂತಿ' ಪುಸ್ತಕ ತಂದು ಕೊಟ್ಟೆ. ತುಂಬಾ ಅತ್ರು. ನೀನೆ ನನ್ನ ಮಗ ಅಂತ.

ಹೇಗಿದ್ದಾರೆ ನಿಮ್ಮ ಮನೆಯವ್ರು? ಇನ್ನ ಹರುಕು ಮುರುಕು ಕನ್ನಡ ಮಾತಡ್ತಾರ? ಸರಿಯಾಗಿ ಕಲ್ಸು ಅವ್ರಿಗೆ. ಊರಿಗೆ ಬಾ ಮಾರಾಯ್ತಿ. ಪತ್ರ ಬರಿ.
ಸರಿ ಸರಿ, ನನ್ನ ಹಾಡು ಬರ್ತ ಇದೆ ರೇಡಿಯೋದಲ್ಲಿ ಬೇಂದ್ರೆ ಮಾಸ್ತರ್ದು. ಸಿಗ್ತೀನಿ ಟಾಟಾ

ಶಾಲು

Monday, July 17, 2006

ಭಾಗ್ಯದ ಬಳೆಗಾರ

'ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ' ಈ ಹಾಡು ಕೇಳ್ದಾಗೆಲ್ಲ ನೆನಪಾಗೊದು ನಮ್ಮ ಅಮ್ಮನ ಊರು. ಶಿರಸಿಯಿಂದ ಸ್ವಲ್ಪವೇ ದೂರದಲ್ಲಿದೆ ಈ ಊರು. ಹಳ್ಳಿ ಅಂತಾನೇ ಹೇಳ್ಬೇಕು. ಮಲೆನಾಡ ಮಡಿಲಲ್ಲಿ ಪುಟ್ಟದಾದ ಊರು.ನಾನು ಅಜ್ಜನ ಮನೆಗೆ( ತಾಯಿಯ ತಂದೆಯನ್ನೂ ನಾವು ಅಜ್ಜ ಅಂತೀವಿ, ತಾತ ಅನ್ನೋ ರೂಢಿ ಇಲ್ಲ) ಬೇಸಿಗೆ ರಜೆ, ಅಕ್ಟೋಬರ ರಜೆಗೆಂದು ಹೋಗುತ್ತಿದ್ದೆವು. ವಿಶೇಷ ಅಂದರೆ, ಆ ಊರಿಗೆ ಒಬ್ಬ ಬಳೆಗಾರನಿದ್ದ. ಏಲ್ಲಿಂದ ಬರುತ್ತಿದ್ದನೋ, ಯಾವೂರಿಗೆ ಹೋಗುತ್ತಿದ್ದನೋ ನಂಗೆ ಗೊತ್ತಿಲ್ಲ. ಬಳೆಗಾರ ಬಂದ ಅನ್ನೋ ವಿಷಯ ಮಾತ್ರ ನಿಮಿಷದಲ್ಲಿ ಊರವರಿಗೆಲ್ಲ ಗೊತ್ತಾಗ್ತಿತ್ತು. ಶಿರ್ಸಿ ಹತ್ರ ಇದ್ರೂ , ಜನ ಬಳೆಗಾರ ಊರಿಗೆ ಬಂದ ಅಂದ್ರೆ ಅದ್ಯಾಕೋ ಸಂಭ್ರಮ ಪಡೋರು. ನಮ್ಮ ಅಜ್ಜನ ಮನೆಯ ಅಂಗಳ ದೊಡ್ಡದಾಗಿತ್ತು. ಚಪ್ಪರ ಹಾಕಿರ್ತಿತ್ತು. ಬಳೆಗಾರ ಬಂದ ದಿನ, ಹಳ್ಳಿ ಹೆಂಗಳೆಯರೆಲ್ಲ ಅಜ್ಜನ ಮನೆ ಅಂಗಳದಲ್ಲಿ. ಚಾಪೆ ಹಾಸಿ ಹಾಗೆ ಎಲ್ಲರೂ ಕುಳಿತು ಕೊಳ್ತಾ ಇದ್ದರು. 'ಅಮ್ಮ, ನಂಗೆ ಆ ಹಸಿರ್ ಚಿಕ್ಕಿ (ಚುಕ್ಕಿ)ಬಳಿ ಬೇಕು, ನಂಗೆ ಮಣ್ಣಿನ ಬಳಿ ಬೇಕು' ಅನ್ನೋರು. ( ಗಾಜಿನ ಬಳೆಗೆ ಮಣ್ಣಿನ ಬಳಿ ಅಂತಿದ್ರು, ನಮ್ಮ ಅಮ್ಮ ಕೂಡ ಹಾಗೆ ಅಂತಾರೆ ಈಗಲೂ). ಬಳೆಗಾರ ಸುಮ್ನೆ ಬಳೆ ಕೊಡ್ತಿರ್ಲಿಲ್ಲ. ಹಾಡ ಹಾಡ್ಬೇಕು ಅವ್ನ ಎದಿರ ಕೂಂತು. ಬರಂಗಿಲ್ಲ ಅಂದ್ರ ಬಿಡಂಗಿಲ್ಲ. ನಮ್ಮ ಸೋದರ ಅತ್ತೆ ಮುಂದಾಗೊವ್ರು. 'ತೊಡಿಸೆ ,ಗರತಿ ಗಂಗವ್ವಂಗೆ ಹಸಿರ ಚಿಕ್ಕಿಯ ಬಳಿ' ಹೀಗೆ ಏನೆನೋ ಹಾಡಿದ ಮೇಲೆ ಬಳೆ ಇಡೊಕ್ ಶುರು ಮಾಡೊವ್ನು. ಹಾಡಿನ ಸುರಿಮಳಿ ಆಗೋದು. ನಾಚ್ಕೊಂಡು ಹಾಡು ಶುರು ಮಾಡಿದ್ರ ನಿಲ್ಲಿಸ್ತಾನೆ ಇರ್ಲಿಲ್ಲ.
ಮದುವೆ ಎನಾದ್ರು ಇದ್ರೆ, ಬಳೆಗಾರಂಗೆ ಬರ ಹೇಳ್ತಿದ್ರು. ಮೊದಲು, ಆಸರಿಗೆ ಕೊಟ್ಟು ( ಆಸರು= ಬಂದವರಿಗೆ ದಣಿವಾರಿಸಲು ಕೊಡುತ್ತಿದ್ದ ನೀರೊ, ಪಾನಕನೊ, ಎನೋ ಒಂದು) ಮದುಮಗಳಿಗೆ ಬಳೆ ಇಡೋ ಶಾಸ್ತ್ರ ಮಾಡಿಸುತ್ತಿದ್ದರು. ಪದಗಳು, ಕಿಲ ಕಿಲ ನಗು, ಮದುಮಗಳ ಜೊತೆ ತಾವು ಬಳೆ ಇಟ್ಕೊಳ್ತೇವೆಂದು ಹಟ ಮಾಡೊ ಮಕ್ಕಳು, ಅದನ್ನ ನೋಡೋದೆ ಚಂದ. ಹಾಗೆ ಬಳೆ ತೊಡಿಸ್ತ, ಅಲ್ಲಿರುವ ಎಲ್ಲರನ್ನು ಮಾತಡಸ್ತ, ನಗಿಸ್ತಿದ್ದ ಬಳೆಗಾರ. ಬಳೆಗಾರನಿಗೆ ಊಟ ಹಾಕಿ, ಅಕ್ಕಿ, ಬೆಲ್ಲ, ಕವಳ( ಎಲೆ, ಅಡಿಕೆ) ಕೊಟ್ಟು ಕಳುಹಿಸುವುದು ಒಂದು ವಾಡಿಕೆ.

ಅಜ್ಜನ ಊರಲ್ಲಿ, ಬಳೆಗಾರ ಕೇವಲ ಬಳೆಗಾರನಲ್ಲ, ಅಲ್ಲಿನ ಹೆಂಗಳೆಯರ ಅಣ್ಣನಾಗಿದ್ದ. ಕಷ್ಟ ಸುಖಗಳನ್ನ ಕಿವಿಗೊಟ್ಟು ಕೇಳುತ್ತಿದ್ದ. ಸಮಾಧಾನ ಮಾಡ್ತಿದ್ದ. ಹಾಡು ಹಾಡಿಸ್ತಿದ್ದ.

ಆದರೆ, ಈಗ ಅಲ್ಲಿಯ ಪರಿಸರವೂ ಬದಲಾಗಿದೆ. ಹಾಡು ಕೇಳಿ ಬರುವುದು ಮದುವೆಯಲ್ಲಿ ಮಾತ್ರ. ಬಳೆಗಾರ ಬರ್ತಾನೋ, ಇಲ್ಲವೋ ನಂಗೆ ತಿಳಿದಿಲ್ಲ. ಇತ್ತೀಚಿನ ದಿನಗಳಲ್ಲಿ ನಾನಂತೂ ಅಜ್ಜನ ಮನೆಗೆ ಹೋಗಿಲ್ಲ. ಬಳೆಗಾರನ ವಿಷಯವೂ ತಿಳಿದಿಲ್ಲ.

ಆದರೆ, ಆಗಿನ ಜಗತ್ತೆ ಸುಂದರ ಅಂತ ನಂಗೆ ಅನ್ನಿಸುತ್ತೆ. ಸುಮ್ಮನೆ ಅಲ್ಲ ಹೇಳೋದು....ಭಾಗ್ಯದ ಬಳೆಗಾರ...............

ಸಿರ್ಸಿ ನೆನಪಾಗ್ತ ಇದೆ. :(

Friday, June 30, 2006

ಒಳಗೆ- ಹೊರಗೆ

ನನ್ನಾಚೆ ಒಂದು ಜಗವಿದೆ
ನನ್ನೊಳು ಮತ್ತೊಂದು ಲೋಕ
ಹೊರಗೊಂದು ತಾಳ
ಒಳಗೊಂದು ತಾಳ, ಮೇಳವಿಲ್ಲ!

ಹೊರಗೆ ಉದಯ
ಒಳಗೆ ಅಸ್ತ
ಹೊರಗಿನ ಬೆಳಕಿನೊಡನೆ ಬೆಳಗಲೊ
ಒಳಗೆ ಬೆಳಕನ್ನು ಅರಸಲೊ

ಹೊರಗೆ ಮೊಗ್ಗು ಬಿರಿಯುತ್ತಿದೆ
ಒಳಗೆ ಬಳ್ಳಿ ಮುರಿಯುತ್ತಿದೆ
ಹೂವಾಗಿ ಅರಳಲೊ
ಬಳ್ಳಿಯೊಡನೆ ಜಾರಲೊ

ಹೊರಗೆ ತುಂತುರಿನ ತನನ
ಒಳಗೆ ಬತ್ತಿದೆ ಮನ
ಹನಿಯೊಡನೆ ಹನಿಯಲೊ
ಮರುಭೂಮಿಯಾಗಲೊ

ಮನವ ಬಿಟ್ಟು ಲೋಕವಿಲ್ಲ
ಲೋಕದಲ್ಲಿ ಮನವಿಲ್ಲ
ಎತ್ತ ಕಿವಿಗೊಡಲಿ?
ಎಲ್ಲಿ ಮನವಿಡಲಿ!

Monday, June 26, 2006

ತಾಯಿ ಭುವನೇಶ್ವರಿ

ತರುವಾಗಿ, ಸಿರಿಯಾಗಿ ಶ್ರೀಗಂಧವಾಗಿ
ನೀರಾಗಿ, ಬಾಳಾಗಿ ಕಾವೇರಿಯಾಗಿ
ಗಿರಿಯಾಗಿ,ಹಿರಿದಾಗಿ ಸಹ್ಯಾದ್ರಿಯಾಗಿ
ಹಸಿರಾಗಿ, ಉಸಿರಾಗಿ ಮಲೆನಾಡಾಗಿ
ಪಂಪ , ರನ್ನರ ಕಾವ್ಯಾಮೃತವಾಗಿ
ದಾಸ , ಶರಣರ ನುಡಿಮುತ್ತುಗಳಾಗಿ
ಶಿಲೆಯಲ್ಲಿ ಕಲೆಯಾಗಿ ಸೌಂದರ್ಯವಾಗಿ
ಕೆಚ್ಚೆದೆಯ ವೀರರ ಇತಿಹಾಸವಾಗಿ
ಹೊನ್ನಿನ ಮಣ್ಣಾಗಿ ಕರುನಾಡಾಗಿ
ನಡೆಯಾಗಿ, ನುಡಿಯಾಗಿ ಕನ್ನಡವಾಗಿ
ಮೆರೆದಿಹಳು ಸಿರಿದೇವಿ ಭುವನೇಶ್ವರಿಯಾಗಿ

Friday, June 23, 2006

ಕನ್ನಡದಲ್ಲಿ

ಏಷ್ಟು ಸಂತೋಷ ಆಗ್ತಾ ಇದೆ ಕನ್ನಡದಲ್ಲಿ ಬರೆಯುವುದಕ್ಕೆ!ಆಹಾಹ

ಕವನ - ಬಂಧನದಿಂ

ಬಿಡಿಸುವೆವು ಬಿಡಿಸುವೆವು ಬಂಧನದಿಂ ನಿನ್ನ
ತೊಡಿಸುವೆವು ತೊಡಿಸುವೆವು ಸ್ವಾತಂತ್ರ್ಯ ಚಿನ್ನ

ಉಸಿರುಂಟು, ಛಲವುಂಟು, ಮುನ್ನುಗ್ಗುವ ಹಠವುಂಟು
ಎಲ್ಲವನೂ ಮೀರೋ ತಾಯಿ ನಿನ್ನೊಲವುಂಟು

ಬವಣೆಯೋ,ದುಗುಡವೋ, ಕಣ್ಣೀರೋ, ಕೆನ್ನೀರೋ
ನಿನ್ನ ಒಲವಲ್ಲಿ ಕಂಡೆವು ಪನ್ನೀರು

ಬಗ್ಗಲಾರೆವು ಇನ್ನು, ನುಗ್ಗಿ ನೆಗೆಯಿರೆಲ್ಲ
ಬಗ್ಗಿ ಬರುವುದು ಗೆಲುವು ನಮಗೆಲ್ಲ

ಅದೋ ನಿಂತಿಹುದು , ಅಲ್ಲೊಮ್ಮೆ ನೋಡಿರೈ
ತಬ್ಬಿ ಮುದ್ದಾಡುವ ಸ್ವಾತಂತ್ರ್ಯವ ಬನ್ನಿರೈ

ಮಳೆ

ಸುರಿವ ಮಳೆಯಾಗಿ
ಹರಿವ ನೀರಾಗಿ
ಎಲೆಗಳ ಮೈ ಮೇಲೆ ಮುತ್ತ ಸಾಲಾಗಿ
ಪುಷ್ಪಪಾತ್ರವ ಸೇರಿ
ಅದರ ಒಡಲೊಳು ಜಾರಿ
ಭೂತಾಯ ದಾಹವ ಇಂಗಿಲೋಸುಗ
ಮಳೆಯಾಗಿ ಹರಿಯುವೆ ನಾನೀಗ

( ಹಾಡುಗಳು ಬರಲಿವೆ.........)

Thursday, June 22, 2006

ಮರೆತೇನೆ!(ಅದ್ಭುತವಾದ ಚಿತ್ರಕ್ಕೆ ಪ್ರಮೋದರಿಗೆ ಹೃತ್ಪೂರ್ವಕ ಧನ್ಯವಾದಗಳು)

Wednesday, April 05, 2006

Manaswini

Nanage ishtavaada padagaLanna haakta iddini illi ( Idu nanna rachane alla)

Kaananada sumavondu
Sourabhava taa soosi
Saphalateya padevante
MaaDenna tande