Saturday, May 31, 2008

ಕವನ ಪೂರ್ಣವಾಗುವುದೇ ಇಲ್ಲ!

ಬೋಳು ಟೊಂಗೆಯ ಒಂಟಿ ಹಕ್ಕಿಯ ಹಾಡು
ಕಥೆಯ ನಾಯಕನ ಕಣ್ಣೀರ ಪಾಡು

ಅರ್ಧ ಬಿಡಿಸಿಟ್ಟ ರಂಗೋಲಿಯ ಬಣ್ಣ
ಬೀದಿ ಪಾಲಾದ ಹುಡುಗಿ, ಅವಳಣ್ಣ

ಮೋಡ ಕಟ್ಟಿ ಪೂರ್ತಿ ಕಪ್ಪಾದ ಬಾನು
ತಾನು, ತನದು,ತನಗೇ ಎನ್ನುವ ಅವನು

ಕನಸುಗಳಲ್ಲೇ ಮುಳುಗಿರುವ ಇವಳು
ಒಡೆದು ಚೂರಾಗಿ ಬಿದ್ದಿರುವ ಹರಳು

ರಸ್ತೆ ಮೇಲೆ ಬಿದ್ದ ಒಂಟಿ ಅನಾಥ ಶವ
ತಪ್ಪಿಸಿಕೊಳ್ಳಲು ಒಂದಲ್ಲೊಂದು ನೆವ

ಮುಖ ತಿರುಗಿ ಮುರಿದ ಮನೆ
ಬತ್ತಿ ಕೆಂಪಾಗಿ ಒಣಗಿದ ತೆನೆ

ಕಣ್ಣಲ್ಲೇ ಬತ್ತಿ ಹೋದ ಹನಿ
ಮಾತುಗಳಲ್ಲೇ ಸತ್ತು ಹೋದ ಪ್ರೇಮಿ

ಊಹೂಂ ... ಹೀಗೆಲ್ಲ ಕವನ ಪೂರ್ಣವಾಗುವುದೇ ಇಲ್ಲ!

Monday, May 05, 2008

ಹನಿಗಳು-೪

ಕಡಲ ದಡದ ಹುಡುಗಿಯದು ಒಡೆಯದ ಮೌನ
ಕಡಲ ಒಡಲೊಳಗಿಂದ ಗುಡುಗಿ ಸಿಡಿವ ಅಲೆಗಳು
ನಿಲ್ಲದ ಸೆಣಸಾಟ
ಅವಳದು ದಿಟ್ಟ ನೋಟ, ಅಲುಗದ ತುಟಿ
ಕಡಲ ತೆರೆಗಳದು ತಾಂಡವ ನೃತ್ಯ
ಬಹಳ ಹೊತ್ತಿನ ತನಕ
ಈಗ ಎಲ್ಲವೂ ಸ್ತಬ್ಧ; ನಿಶ್ಯಬ್ದ
ಸಾಗರವೇ ಸಂಧಾನಕ್ಕೆ ಬಂದಂತೆ

*********************

ಮಂದ ಬೆಳಕಿನ ಬೀದಿ ದೀಪಗಳಲ್ಲಿ
ನಾ ಕೇರಿಗಳನ್ನ ದಾಟುವಾಗ
ಮಿಂಚಂತೆ ಮುಂದೆ ಬರಬೇಡ ಮಾರಾಯ್ತಿ
ಕಣ್ಣು ಕುಕ್ಕಿ,ಆಯ ತಪ್ಪಿ, ಬಿದ್ದು ಬಿಡುತ್ತೇನೆ
ಜನ ನನ್ನ ಕುಡುಕನೆನ್ನುತ್ತಾರೆ

Sunday, May 04, 2008

ಐ.ಪಿ.ಎಲ್ ಜ್ವರ

( ಮನೆಯಲ್ಲಿ ನಡೆದ ಸಂಭಾಷಣೆ. ಹೇಗಿತ್ತೋ ಹಾಗೇ ಬರೆದು ಹಾಕ್ತಾ ಇದ್ದೇನೆ. ದ್ರಾವಿಡ್ ಫ್ಯಾನ್ಸ್ ದಯವಿಟ್ಟು ಸಿಟ್ಟು, ಬೇಜಾರು ಮಾಡ್ಕೋಬೇಡಿ)

ಅಪ್ಪ : ರೊಯಲ್ ಚಾಲೇಂಜರ್ಸ್ ಒಳ್ಳೆ ಟೆಸ್ಟ್ ಟೀಮ್ ತರ ಇದೆ. ಎಲ್ಲರೂ ಕುಟ್ಟೋವ್ರೇ. ಕ್ಯಾಪ್ಟನ್ ಅಂತು ..ದೇವ್ರೇ.... ಅಷ್ಟು ಮ್ಯಾಚ್ ಸೋತಿದಾರೆ, ಸ್ವಲ್ಪ ಆದ್ರೂ ಗಂಭೀರವಾಗಿ ಆಡ್ಬಾರ್ದಾ!

ತಂಗಿ: ಯಾಕ್ ಸುಮ್ನೆ ಸುಮ್ನೆ ರೊಯಲ್ ಚಾಲೇಂಜರ್ಸ್ ಗೆ ಬಯ್ಯೋದು? ರಾಹುಲ್ ದ್ರಾವಿಡ್ ಪಾಆಆಆಆಆಆಆಆಆಆಆಅಪ. ಲಕ್ ಸರಿಯಿಲ್ಲ. ಗೆಲ್ಲೊ ಮ್ಯಾಚ್ ಸೋಲ್ತಾ ಇದ್ದಾನೆ.

ಅಪ್ಪ : ಹೌದೌದು. ಗೆಲ್ಲೋ ಮ್ಯಾಚ್ ಸೋಲ್ತಾನೆ! (sarcastic)

ತಂಗಿ: ಹೂಂ ಮತ್ತೆ.

ಅಪ್ಪ: ಗೆಲ್ಲೋದೆ ಆಗಿದ್ರೆ , ಫೋರ್ ರನ್ಸ್ ಹೋಡಿತಾ ಇದ್ದ. ಸಿಕ್ಸ್ ಎತ್ತೋಕಂತು ಆಗಲ್ಲ. ಒಂದೊಂದು ಓವರ್ಗೆ ೨ ಫೋರ್ ಹೋಡೆದ್ರು ಸಾಕು .೨೦-೨೦ ಮ್ಯಾಚ್ . ೧ ಫೋರ್ ಹೋಡದ್ರೆ , ೩ ಬಾಲ್ ಹಾಳ್ಮಾಡ್ತಾನೆ.

ತಂಗಿ : ಯಾಕಷ್ಟು ಬೈತೀರಾ? ಅವನಿಗೂ ಮ್ಯಾಚ್ ಗೆಲ್ಲ್ ಬೇಕು ಅಂತಾನೇ ಇರುತ್ತೆ.
ಅಪ್ಪ : ಓಹ್

ತಂಗಿ : ಓದಿಲ್ಲಾದ್ರೂ ಪಾಸ್ ಆಗ್ಬೇಕು ಅನ್ನೋ ಆಸೆ ಯಾರಿಗಿರಲ್ಲ! ಹಾಗೇನೆ ದ್ರಾವಿಡ್ಗೂ.

(ಏತನ್ಮಧ್ಯೆ ಅಮ್ಮ ನನ್ನ ಜೊತೆ ಬೇರೆ ಯಾವುದೋ ವಿಷಯ)

ಅಮ್ಮ : ಹೌದೆ! ಭಟ್ರ ಹತ್ರಾ ಆದ್ರೂ ತೋರ್ಸ್ಕೊಂಡು ಬರಬೇಕು. ಎಂತ ಮಾಟ ಮಂತ್ರದ ಕಾಟವೋ

ತಂಗಿ : ಹೌದಮ್ಮ, ರಾಹುಲ್ ದ್ರಾವಿಡನ ಕರ್ಕೊಂಡು ಹೋಗು.

:)

(ನಿನ್ನೆ ಡೆಕ್ಕನ್ ಚಾರ್ಜ್ ರ್ಸ್ ವಿರುದ್ಧ ದ್ರಾವಿಡನ ಸಿಕ್ಸ್ ನೋಡಿ ನಮಗೆಲ್ಲ ಖುಶಿಯೋ ಖುಶಿ . ರೊಯಲ್ ಚಾಲೇಂಜರ್ಸ್ ನಿನ್ನೆ ಮ್ಯಾಚ್ ಗೆದ್ದಾಕ್ಷಣ , ತಂಗಿಯ ಮುಖ ನೋಡ್ಬೇಕಿತ್ತು. ಅಪ್ಪನ ನೋಡೋದು, ರಾಹುಲ್ ದ್ರಾವಿಡನ ಸಿಕ್ಸ್ ಬಗ್ಗೆ ಹೇಳೋದು.
All the best Royal Challengers. )