Monday, July 14, 2008

ಖಾಲಿ ಕ್ಯಾನ್ವಾಸ್

ಮನೆಯ ಮೇಲೆ ಮನೆಗಳು
ಆಕಾಶ ಮುಟ್ಟುವಂತೆ
ಅಂಗಳ , ಹಿತ್ತಲು?
ಎಲ್ಲ ನುಂಗಿಯಾಗಿದೆ
ಈಗ ಬಿ.ಎಚ್.ಕೆ ಅಮಲು

ನೆರೆಹೊರೆಯಲ್ಲಿ ಯಾರು?
ಅವೆಲ್ಲ ಬರಿಯ ಹೊರೆ
ತಂದೆ ತಾಯಿ?
ಊರಲ್ಲಿಹರು..
ಕಾಸು ಕಳಿಸುತ್ತೇವೆ

ಮಧ್ಯಾಹ್ನದಲ್ಲಿ
ಹನಿನೀರು, ಮೂರು ತುತ್ತೆಂದು
ಬಂದೀರಿ ಜೋಕೆ!
ಬೆಳಿಗ್ಗೆ ಜಡಿದ ಬೀಗಕ್ಕೆ
ಚಂದ್ರೋದಯದ ಮೇಲೆ ಬಿಡುಗಡೆ

ಗಿಡ ಮರ ಬಳ್ಳಿ ಹೂವು?
ಓಹೋ ಕುಂಡಗಳಿವೆ
ಬಣ್ಣದ ಗಿಡ
ಪೇಪರ್ ಹೂವು
ಎಲ್ಲ ಫಾರಿನ್ ಸಾಮಾನು

ಕಟ್ಟಿಟ್ಟ ಉಸಿರು
ಪರದೆಯೊಳಗಿನ ಪ್ರಪಂಚ
ಪುರುಸೊತ್ತಿಲ್ಲ
ಇದ್ದಿದ್ದರೆ ಅಲ್ಲೇ...
ಯಾಕೆ ಬಿಡಿ...

ಆ ಮಾಲ್, ಈ ಮಾಲ್
ಆ ಸಿನೇಮಾ, ಈ ಹೋಟೆಲ್
ಪುಸ್ತಕದ ಪಿ.ಡಿ.ಎಫ್
ಒಂದಿಷ್ಟು ಕರೆಗಳು
ಕೊನೆಯೆರಡು ದಿನಗಳು

ಊರ ಹೊರವಲಯದಲಿ
ತುಂಡುಭೂಮಿಗಾಗಿ
ಮೈಮೇಲೆ ಸಾಲದ ಗಾಯ;
ಉಪ್ಪು ಮೆತ್ತಿದ ಹಾಗೆ
ಇನ್ನೊಂದೆರಡು ಇಎಂಐ

ಹಸಿರು ಉಸಿರು, ಗಾಳಿ ಗಂಧ?
ಹಕ್ಕಿ ಪಕ್ಕಿ, ಬೆಟ್ಟ ಬಯಲು?
ನದ ನದಿ ಕಡಲ ಮಡಿಲು?
ಹೌದಲ್ಲ! ಬಹಳ ತಿಂಗಳಾದವಲ್ಲ
ಪ್ರವಾಸವಿಲ್ಲ

ನೆಮ್ಮದಿಯ ಬಾಳೆಂದು?
ಇನ್ನೊಂದೆರಡು ಸಲ
ಭೂಮಿಯ ಆ ತುದಿಗೆ ಹೋಗಿ
ಬಂದರೆ , ಎರಡು ಕಾಸು ತಂದರೆ
ಖಂಡಿತ ಖಂಡಿತ...ನೆಮ್ಮದಿ