Wednesday, April 23, 2008

ಬೇಸಿಗೆಯ ರಜೆಗಳೆಂದರೆ........

( ನಾನು ಚಿಕ್ಕವಳಿದ್ದಾಗ, ಪ್ರತಿ ಬೇಸಿಗೆ ರಜೆಗೆಂದು ಅಜ್ಜನ ಊರಿಗೆ ಹೋಗುತ್ತಿದ್ದೆ. ಶಿರಸಿಯಿಂದ ಸುಮಾರು ೫-೬ ಮೈಲಿಯ ದೂರದಲ್ಲಿದೆ ಆ ಹಳ್ಳಿ. ಈಗ ಆ ಪುಟ್ಟ ಹಳ್ಳಿಗೆ ಕರೆಂಟೂ ಬಂದಿದೆ, ಟಿ.ವಿಯೂ ಬಂದಿದೆ. ಆ ದಿನಗಳು ಮತ್ತೆ ಮತ್ತೆ ನೆನಪಾಗಿವೆ.)

ಬೇಸಿಗೆಯ ರಜೆಗಳೆಂದರೆ........

ಆರು ಮೈಲಿಯ ದೂರ, ಎರಡು ಕೇರಿಯ ಊರು
ಸುತ್ತೆಲ್ಲ ಹಸಿರು, ಮಧ್ಯೆ ಅಜ್ಜನ ಸೂರು

ಕಡುಬು, ಕಾಯಿ ಚಟ್ನಿ, ರೊಟ್ಟಿಯ ಚೂರು
ಮಿಡಿಯ ಉಪ್ಪಿನಕಾಯಿ, ಗಟ್ಟಿ ಮೊಸರು

ಆಸರಿಗೆ ಮಜ್ಜಿಗೆ , ಪಾನಕ, ಎಳೆನೀರು
ಮಾವು, ಗೇರು, ನೇರಳೆ, ಹೀಗೆ ಹಲವಾರು

ಜಜ್ಜಿದ ಹುಣಸೆ ಕಾಯಿ, ಉಪ್ಪು, ಸ್ವಲ್ಪ ಖಾರ
ಕವಳಿಯ ಮಟ್ಟಿ, ಕೊಟ್ಟಿಗೆಯ ಪುಟ್ಟ ಕರು

ಎಲೆರಾಶಿ ಮೇಲೆ ಚಿತ್ತಾರದ ಹಪ್ಪಳ
ಬಿಸಿಲಲಿ ಒಣಗಿಸಲು ನಿಲ್ಲದ ಜಗಳ

ಉರಿಬಿಸಿಲ ಹೊತ್ತಿನಲಿ ಮಕ್ಕಳ ಹಿಂಡು
ಕಳ್ಳ ಪೋಲಿಸ್, ಲಗೋರಿ, ಚಿನ್ನಿ ದಾಂಡು

ಗೋಧೂಳಿ ಹೊತ್ತಲಿ ಇನ್ನೊಮ್ಮೆ ಸ್ನಾನ
ತಲೆ ಬಾಚಿ, ಜಡೆ ಹೆಣೆದು, ಮುತ್ತ ನೀಡುವ ಅಮ್ಮ

ದೊಡ್ಡ ದೀಪದ ಮುಂದೆ ದೊಡ್ಡ ಸ್ವರದಲಿ ಭಜನೆ
ಅಮ್ಮ, ಅತ್ತೆಮ್ಮನ ಜಾನಪದದ ಮಜವೇ

ಬೀಸುಕಲ್ಲಿನಲಿ ಅಕ್ಕಿಯಾಗಿದೆ ಹಿಟ್ಟು
ಹಿಟ್ಟಲೆ ರಂಗೋಲಿ ಪುಟ್ಟ ಬೆರಳುಗಳಿಟ್ಟು

ಉರಿವ ಚಿಮಣಿಯ ಸುತ್ತ ನಿಲ್ಲದ ಚೇಷ್ಟೆ
ಮಾವನ ಕಣ್ಣುಗಳು ಎಷ್ಟಗಲ ಗೊತ್ತೇ?

ಕರೆಂಟು ಇಲ್ಲದ ಮನೆಯಲಿ, ಎಂಟಕ್ಕೆ ಊಟ
ಒಂಬತ್ತಕ್ಕೆಲ್ಲ ಹಾಗೆ ಹಾಸಿಗೆ ಸಿದ್ಧ

ಕಥೆಗಳ ಜೊತೆಗೆ, ಪಿಸು ಪಿಸು ಮಾತು
ದೊಡ್ಡವರ ಜೋರಿಲ್ಲದೆ ಮಲಗುವುದೆಂತು?

15 comments:

ರಾಧಾಕೃಷ್ಣ ಆನೆಗುಂಡಿ. said...

ಯಾಕೋ ಹೆಚ್ಚಿನವರಿಗೆ ನಾನು ಸೇರಿದಂತೆ ಊರಿನ ತುಡಿತ ಹೆಚ್ಚಾದ ಹಾಗಿದೆ.

Anonymous said...

bahaLa chennAgide nenapugaLu.
bahutEka nammellaradU HAgE iruttavallave...?
haLAtella nenapAytu.
- Chetana

ಮನಸ್ವಿ said...

ನಾನು ಅರೆ ಮನಸ್ವಿನಿ ಅಂತ ಯಾರೋ ಇದ್ದರಲ್ಲ ಎಂದು ಕ್ಲಿಕ್ಕಿಸಿದೆ!.. ತುಂಬ ಚನ್ನಾಗಿ ಬರೆದಿದ್ದೀರಿ ,ಹಳ್ಳಿಯ ಸಂಪೂರ್ಣ ಚಿತ್ರಣವಿದೆ ಅನಿಸಿತು

ನಾವಡ said...

ಮನಸ್ವಿನಿಯವರೇ,
ನೆನಪು ನಮ್ಮನ್ನೂ ಊರಿನ ಹಿತ್ತಲಿಗೆ ಕೊಂಡೊಯ್ದಿತು. ಒಳ್ಳೆಯ ಪದ್ಯ. ಮಕ್ಕಳಿಗಂತೂ ಹೇಳಿ ಕೊಟ್ಟು ಕುಣಿಸುವ ಪದ್ಯ.

ಉರಿವ ಚಿಮಣಿಯ ಸುತ್ತ ನಿಲ್ಲದ ಚೇಷ್ಟೆ
ಮಾವನ ಕಣ್ಣುಗಳು ಎಷ್ಟಗಲ ಗೊತ್ತೇ?
ಈ ಸಾಲುಗಳು ಖುಶಿ ನೀಡಿದವು. ಹೀಂಗೆ ಬರೆಯೋಕೆ ನಮ್ಗೆ ಕಷ್ಟ.
ನಾವಡ

ಸುಪ್ತದೀಪ್ತಿ suptadeepti said...

ಹ್ಙೂಂ...! ನಮ್ಮಜ್ಜಿ ಮನೆಗೆ ನೀನೂ ಬಂದಿದ್ದೆಯಾ?

rasagavala said...

"BESIGEYA RAJEGALENDARE..........."tumba chalo iddu. hunase hannu, uppu khara ella sersi jajji kaddiya tudige mettikondu chapparisuttiddaddella nenapatu...bayalli neeru jinugiddu gotte aaydille. Dhanyavadagalu......

ಶ್ವೇತಾ ಹೆಗಡೆ said...

chennagittu. ivattashte maneyinda bande. matte alli nenpu kadtide eega....

ಮನಸ್ವಿನಿ said...

ರಾಧಾಕೃಷ್ಣ,
ಇರಬೇಕು :) . ಧನ್ಯವಾದಗಳು.

ಚೇತನಾ,
ಸ್ವಾಗತ, ಬರುತ್ತಿರಿ. ಧನ್ಯವಾದಗಳು.

ಮನಸ್ವಿ,
ಅರೆರೆರೆ :)
ಸ್ವಾಗತ,ಬರುತ್ತಿರಿ. ಧನ್ಯವಾದಗಳು.

ನಾವಡರೇ,
ಧನ್ಯವಾದಗಳು. ಹಳೆಯ ನೆನಪುಗಳನ್ನ ಅದೇ ಭಾಷೆಯಲ್ಲೆ ಬರೆದೆ. ಖುಶಿಯಾಯ್ತು ನಿಮಗೆ ಇಷ್ಟ ಆಗಿದ್ದಕ್ಕೆ.

ಸುಪ್ತದೀಪ್ತಿ,
ಹೌದು :) ಧನ್ಯವಾದಗಳು.

ರಸಗವಳ,
ಮಸ್ತ್ ಇದೆ ಹೆಸರು :)
ಸ್ವಾಗತ, ಧನ್ಯವಾದ, ಬರುತ್ತಿರಿ.

ಸವಿಗನಸು......
ನಂಗೂ ಅಷ್ಟೇ. ಇವತ್ತಷ್ಟೆ ಊರಿಂದ ಬಂದೆ.ಧನ್ಯವಾದಗಳು.

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಸು,
ಚೆನ್ನಾಗಿದೆ... ಓದ್ತಾ ಓದ್ತಾ ಹಾಆಆಆಆ...ಗೆ ಕಳ್ದು ಹೋದೆ !

-ಪೂರ್ಣಿಮಾ

ಮನಸ್ವಿನಿ said...

ಪೂರ್ಣಿಮಾ,

ಧನ್ಯವಾದಗಳು. ಕಳೆದೆಲ್ಲ ಹೋಗಬೇಡ ಮಾರಾಯ್ತಿ. ನಿನ್ನದು ಒಂದು ಬ್ಲಾಗ್ ಇದೆ ಅಂತ ಈಗ ಗೊತ್ತಾಯ್ತು.

ಅಕ್ಷಯ ರಾಮ ಕಾವಿನಮೂಲೆ said...

chennaagide... mane nempaayitu.....

ಮನಸ್ವಿನಿ said...

ಅಕ್ಷಯ,
ಸ್ವಾಗತ,ಬರುತ್ತಿರಿ. ಧನ್ಯವಾದಗಳು.

Anonymous said...

Hey Manaswini.. Kavana thumba chennagide. I can connect n enjoy because even my childhood days were very similar..Nerale, Geu, Uppinakayi yela nenapu maadisiddakke dhanyavaadagalu..

Holalkere rangarao laxmivenkatesh said...

'ಬೀಸುಕಲ್ಲಿನಲಿ ಅಕ್ಕಿಯಾಗಿದೆ ಹಿಟ್ಟು
ಹಿಟ್ಟಲೆ ರಂಗೋಲಿ ಪುಟ್ಟ ಬೆರಳುಗಳಿಟ್ಟು'
ಈ ತರಹದ ಅನೇಕ ಸಾಲುಗಳು ಹಳ್ಳಿಯ ಜೀವನದ ವೈಭವಯುತ ಜೀವನದ ಸ್ಮೃತಿಗಳು ನಮಗೆ ದೊರಕುತ್ತವೆ. ಧನ್ಯವಾದಗಳು.

Holalkere rangarao laxmivenkatesh said...

ಕರೆಂಟು ಇಲ್ಲದ ಮನೆಯಲಿ, ಎಂಟಕ್ಕೆ ಊಟ
ಒಂಬತ್ತಕ್ಕೆಲ್ಲ ಹಾಗೆ ಹಾಸಿಗೆ ಸಿದ್ಧ
ಇದರ ಅನುಭವ ನನಗೆ ಚೆನ್ನಾಗಿ ಆಗಿದೆ. ಚಿತ್ರದುರ್ಗದ ಒಂದು ಕಗ್ಗಹಳ್ಳಿಯವನಾದ ನನಗೆ ಇದು ತುಂಬಾ ಮುದಕೊಟ್ಟ ಪಂಕ್ತಿ !