Wednesday, April 11, 2007

ಕನಸು

ಕತ್ತಲ ರಾತ್ರಿಯಲಿ,ಹೊದಿಕೆಯ ಒಳಗೆ
ಕಣ್ಣು ಮುಚ್ಚಿ,ನಿದ್ರೆ ಹೋಗಿ
ಕಂಡ ಕನಸುಗಳೆಷ್ಟೊ ;ಹೂವಿನ ಹಾದಿಗಳೆಷ್ಟೊ!
ಬೆಳಗಾಗುವ ಮುನ್ನ,ಕಣ್ಣು ತೆರೆಯುವ ಮುನ್ನ
ಅಳಿಸಿ ಹೋದ,ಹಳಸಿ ಹೋದ
ನವಿರು ಕನಸುಗಳೆಷ್ಟೊ!

ಇಂದಿಲ್ಲಿ ಹಗಲಾಗಿದೆ,ಕಣ್ಣು ತೆರೆದಿದೆ
ಮನದಲ್ಲಿ ಹೊಸತು ಕನಸು
ಹೂವಿನ ಹಾದಿಯೇನಿಲ್ಲ
ಹುರುಪು ತುಂಬಿ,ಛಲವ ಬಿತ್ತಿ
ಮುಂದೆನ್ನ ಕಥೆ ಬರೆಯುವ
ಸರಳ ಕನಸಷ್ಟೆ!

ಅಂದ ಹಾಗೆ ನನ್ನ ಬ್ಲಾಗಿಗೆ ಒಂದು ವರ್ಷವಾಯಿತು. ಉತ್ತೇಜಿಸಿದ,ತಿದ್ದಿದ ,ಪ್ರಶಂಸಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು

30 comments:

bhadra said...

ಬ್ಲಾಗಿನ ಹುಟ್ಟುಹಬ್ಬದ ಶುಭಸಂದರ್ಭದಲ್ಲಿ ಬ್ಲಾಗ್ ಮರಿಗೆ ಶುಭಾಶಯಗಳು. ಬ್ಲಾಗನ್ನು ಸುಂದರವಾಗಿ, ಅಚ್ಚುಕಟ್ಟಾಗಿ, ನೋಡುವ ಕಣ್ಣುಗಳಿಗೆ, ಓದುವ ಮನಗಳಿಗೆ ಆನಂದವನ್ನು ತಂದಿತ್ತು, ಚಿಂತನೆಗಳಿಗೆ ಒರೆ ಹಚ್ಚುವಂತೆ ಮಾಡುತ್ತಿರುವ ಮನಸ್ವಿನಿಯ ಕೈಗಳು ಇನ್ನೂ ಹೆಚ್ಚು ಬಲವಾಗಿ ಸರಸ್ವತೀ ಮಾತೆಯ ಅನುಗ್ರಹವಾಗಿ ಸಾರಸ್ವತ ಲೋಕವನ್ನು ಬೆಳಗುವಂತಾಗಲಿ ಎಂದು ಹಾರೈಸುವೆ.

ರಾತ್ರಿ ಕಂಡ ಕನಸುಗಳಲ್ಲಿ ಮನದಲ್ಲಿ ಅಚ್ಚಳಿಯದಂತೆ ಉಳಿದವೆಷ್ಟೋ, ಅಳಿಸಿಹೋದವುಗಳೆಷ್ಟೋ. ಅವುಗಳೊಂದಿಗೆ ಚಿಂತನೆಯ ಸಂದರ್ಭದಲಿ ಹಗಲಿನಲಿ ಕಂಡ ಕನಸುಗಳೆಷ್ಟೋ. ಆದರೆ ನನಸಾಗಿ ಪರಿವರ್ತಿಸಲು ಮನಕೆ ಒತ್ತು ನೀಡಿದ ಕನಸುಗಳು ವಿರಳ. ಈ ಎಲ್ಲ ಕನಸುಗಳ ಒಕ್ಕಣಿಕೆಗಳು ಬರಹ ರೂಪದಲ್ಲಿ ಹರಿದು ಓದುಗರನ್ನು ತಂತಮ್ಮ ಕನಸುಗಳ ಲೋಕಕ್ಕೆ ಕರೆದೊಯ್ಯುವಂತೆ ಪ್ರೇರೇಪಿಸಿರಿ.

ಮತ್ತೊಂದು ಸುಂದರ ಕವನವನ್ನು ನೀಡಿ, ನಾ ಕಂಡ ಕನಸುಗಳನ್ನು ಮೆಲುಕು ಹಾಕುವಂತೆ ಮಾಡಿದುದ್ದಕ್ಕೆ ವಂದನೆಗಳು.

Sushrutha Dodderi said...

ಮನಸ್ವಿನಿ, ಬ್ಲಾಗ್ ಹುಟ್ಟುಹಬ್ಬದ ಶುಭಾಶಯಗಳು.ಪಾರ್ಟಿ ಎಲ್ಲಿ ಕೊಡ್ತಾ ಇದ್ದೆ ಅಂತ ಒಂದು ದಿನ ಮುಂಚೇನೇ ತಿಳ್ಸು. ರೆಡಿಯಾಗಿ ಬರ್ತಿ. :)

ಸುಪ್ತದೀಪ್ತಿ suptadeepti said...

ಕನಸುಗಳು ಸದಾ ನಮ್ಮೆಲ್ಲರ ಜೀವನಾಡಿ. ಕನಸಿಗನಲ್ಲದ ಮಾನವ ಇಲ್ಲವೆನ್ನಬಹುದೇನೋ! ಮನುಜಕುಲದ ಇಂದಿನ ನಿಲುವಿಗೆ, ಬೆಳವಣಿಗೆಗೆ ಸಂದ ಕನಸುಗಳೆಷ್ಟೋ. ಅಂತಹ ಕನಸುಗಳಿಗೆ ನನ್ನದೂ ನಮನ, ನಿನ್ನ ಕನಸಿನ ಕೂಸು, ಈ ಬ್ಲಾಗಿಗೆ ವರುಷ ಸಂದ ಸಂದರ್ಭದಲ್ಲಿ ಶುಭ ಹಾರೈಕೆಗಳು. ಸಿಹಿ ಎಲ್ಲ್ಲಿ!?

ಸಿಂಧು sindhu said...

ಹಾಯ್, ಮನಸ್ವಿನಿಯ ಪದ ಲಾಲಿತ್ಯಕ್ಕೆ, ವಿಚಾರ-ಸರಿತಕ್ಕೆ ಭಾವದ ಹೊನಲಿಗೆ ವರ್ಷ ತುಂಬಿದ್ದಕ್ಕೆ ಶುಭಾಶಯಗಳು.

ಕಂಡ ಕನಸುಗಳೆಷ್ಟೋ; ಹೂವಿನ ಹಾದಿಗಳೆಷ್ಟೋ!
....
ಇಂದಿಲ್ಲಿ ಹಗಲಾಗಿದೆ, ಕಣ್ಣು ತೆರೆದಿದೆ..

ಈ ಸಾಲುಗಳು ತುಂಬ ಇಷ್ಟವಾಯಿತು. ಇಡೀ ಕವನವೂ ಚಂದವಿದೆ.

ಯಾರ ಹಾದಿಯ ತುಂಬವೂ ಹೂವಿರುವುದಿಲ್ಲ. ಕಲ್ಲು ಹಾದಿಯ ಬದಿಯ ಹೂಗಿಡಗಳನ್ನು ನೋಡಿ ನಡೆವ ಕಣ್ಣು ಮುಖ್ಯ. ನಿಮಗೆ ಆ ಭಾವ ನಯನವಿದೆ. ನಿಮ್ಮ ದಾರಿಯುದ್ದದ ಗಿಡಗಳಲ್ಲ್ಲಿ ಗೊಂಚಲು ಗೊಂಚಲು ಹೂ,ಮೊಗ್ಗು, ಕಾಯಿ ತೂಗಿರಲಿ.. ನಿಮ್ಮ ಕನಸುಗಳಿಗೆ ಹಂದರವಾಗಲಿ.

ರಾಜೇಶ್ ನಾಯ್ಕ said...

ಮನಸ್ವಿನಿ,

ನಿಮ್ಮ ದಡದಿಂದ ದಡಕ್ಕೆ ಕವನ, 'ಕವನ ಪ್ರಿಯ'ನಲ್ಲದ ನನಗೆ ಬಹಳ ಹಿಡಿಸಿತ್ತು. ಈಗ ಈ ಕನಸುಗಳ ಕವನ ಇನ್ನೂ ಉತ್ತಮವಾಗಿ ಬಂದಿದೆ. ನಿನ್ನೆ ಕಂಡ ಕನಸು, ಇಂದಿನ ಜೀವನಕ್ಕೆ ಸ್ಫೂರ್ತಿ. ಶುಭಾಷಯಗಳು ಒಂದನೇ ಜನ್ಮದಿನದಂದು!

ಮನಸ್ವಿನಿ said...

ತವಿಶ್ರೀ ಸರ್,

ನಿಮ್ಮ ಹಾರೈಕೆಗೆ ವಂದನೆಗಳು. ಸದಾ ಸಲಹೆಗಳನ್ನ ನೀಡುತ್ತ ನನ್ನನ್ನು ಉತ್ತೇಜಿಸಿದ್ದೀರಿ.ನಿಮಗೆ ನಾನು ಚಿರಋಣಿ. ತುಂಬಾ ಧನ್ಯವಾದಗಳು

’ಬ್ಲಾಗ್ ಮರಿ’ ಸಂತೋಷ :)

ಮನಸ್ವಿನಿ said...

ಸುಶ್ರುತ,

ಧನ್ಯವಾದಗಳು. ಪಾರ್ಟಿ ಕೊಡ್ತಿ...ಆದ್ರೆ ನಾನು ಭಾರತಕ್ಕೆ ಬರತಂಕ ನೀನು ಕಾಯವ್ವು, ಇಲ್ಲ ಅಂದ್ರೆ ಇಲ್ಲಿಗೆ ಬಂದ್ಬಿಡು. ಕೊಡ್ತಿ :)

ಮನಸ್ವಿನಿ said...

ಸುಪ್ತದೀಪ್ತಿ,

"ಕನಸುಗಳು ಸದಾ ನಮ್ಮೆಲ್ಲರ ಜೀವನಾಡಿ"-ಸರಿಯಾಗಿ ಹೇಳಿದ್ರಿ. ಧನ್ಯವಾದಗಳು. ನನ್ನ ಕ್ಯಾಂಡಿ ನೆನಪಿದೆ ತಾನೆ! ಸಿಹಿಗೇನು, ಕೊಡ್ತೀನಿ. ಇಲ್ಲಿಗೆ ಬನ್ನಿ...ಇಲ್ಲಾ ಅಂದ್ರೆ ಸಿರ್ಸಿಯಲ್ಲೊ, ಕಾರ್ಕಳದಲ್ಲೊ ಸಿಗುವ. ಏನಂತೀರಾ?

ಮನಸ್ವಿನಿ said...

ಸಿಂಧು,

ಹಾರೈಕೆಗೆ ಮತ್ತು ಹಾಡನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

’ಯಾರ ಹಾದಿಯ ತುಂಬವೂ ಹೂವಿರುವುದಿಲ್ಲ. ಕಲ್ಲು ಹಾದಿಯ ಬದಿಯ ಹೂಗಿಡಗಳನ್ನು ನೋಡಿ ನಡೆವ ಕಣ್ಣು ಮುಖ್ಯ. ನಿಮಗೆ ಆ ಭಾವ ನಯನವಿದೆ. ನಿಮ್ಮ ದಾರಿಯುದ್ದದ ಗಿಡಗಳಲ್ಲ್ಲಿ ಗೊಂಚಲು ಗೊಂಚಲು ಹೂ,ಮೊಗ್ಗು, ಕಾಯಿ ತೂಗಿರಲಿ.. ನಿಮ್ಮ ಕನಸುಗಳಿಗೆ ಹಂದರವಾಗಲಿ. ’- ಧನ್ಯಳಾದೆ :)

ಮನಸ್ವಿನಿ said...

ರಾಜೇಶರವರೆ,

ನನ್ನ ಬ್ಲಾಗಿಗೆ ಸ್ವಾಗತ .

ನನ್ನ ಹಾಡನ್ನು ಮೆಚ್ಚಿಕೊಂಡಿದ್ದಕ್ಕೆ ಮತ್ತು ಹಾರೈಕೆಗೆ ಧನ್ಯವಾದಗಳು.

Shree said...

Blog-ge HuTTuhabbada Shubhaashaya.. Manaswiniya manasige enduu hosa hurupirali antha haaraike.. thoughts chennagide.. keep it up.

Pramod P T said...

ಹಾಯ್ ಸುರೇಖಾ,

ಬ್ಲಾಗ್-ನ ಹುಟ್ಟು ಹಬ್ಬದ ಶುಭಾಷಯಗಳು.
ಇಲ್ಲಿಯಯವರೆಗಿನ ಎಲ್ಲಾ ಕವನಗಳನ್ನ ಸೇರಿಸಿ ಒಂದು 'ಕವನ ಸಂಕಲನ' ಹೊರತಾ!

Vijendra ( ವಿಜೇಂದ್ರ ರಾವ್ ) said...

xaspiಮನಸ್ವಿನಿ ಮನಕ್ಕೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ....

ಆತ್ಮ ಕಥೆ ಬರೀಬೇಕು ಅಂತ ಇದೀರ?

ಕವನ ಒಳ್ಳೇದಿತ್ತು

Shiv said...

ಮನಸ್ವಿನಿ,

ಸುಂದರ ಕವನ !
ನಿಮ್ಮ ಸರಳ ಕನಸು ನನಸಾಗಲಿ..
ನಿಮ್ಮ ಬ್ಲಾಗ್ ಹೀಗೆ ಸುಂದರವಾಗಿ ಬೆಳೆದು ಮನಸ್ಸುಗಳನ್ನು ಮುದಗೊಳಿಸಲಿ

Mahantesh said...

masta ide re..nimma kanasugalu heegi muMduvarita irali..
nimma kavanagaLu manassu gelta irli

nimma blogina ondu varsha huttuhabbakke shubhashagalu

VENU VINOD said...

ಮೊದಲರ್ಧದಲ್ಲಿ ದಟ್ಟವಾಗಿದ್ದ ಕನಸುಗಳು ಎರಡನೇ ಪ್ಯಾರಾದಲ್ಲಿ ಕೊಂಚ ತೆಳುವಾದದ್ದೇಕೆ? ಹೊಂದಾಣಿಕೆಯೇ ? ತಿಳಿಯಲಿಲ್ಲ.
ಒಂದುವರ್ಷ ಪೂರ್ತಿ ಬ್ಲಾಗಿಸಿದ ನಿಮಗೆ ಅಭಿನಂದನೆ

ಭಾವಜೀವಿ... said...

ತಾನೂ ಬೆಳೆದು, ನನ್ನಂತವರನ್ನೂ ಬೆಳಸುತ್ತಿರುವ ನಿನ್ನ ಈ ಕನಸಿನ ಕೂಸಿನ ಹುಟ್ಟು ಹಬ್ಬಕ್ಕೆ ನನ್ನ ಶುಭಾಶಯಗಳು!
ಎದುರಿಗೆ ಸಿಕ್ಕದ್ದೆಲ್ಲಾ ಹೂವಿನ ಹಾದಿಯಾದರೆ ಕನಸುವ ಅಗತ್ಯವೆ ಇರುವುದಿಲ್ಲ, ಹೊಟ್ಟೆ ತುಂಬಿದವನಿಗೇತಕ್ಕೆ ಮೃಷ್ಟಾನ್ನ ಭೋಜನ ಅಲ್ಲವೇ?
ಕಾಲಡಿಯ ಕಲ್ಲು ಮುಳ್ಳುಗಳು ಕಣ್ಣಿಗೆ, ಮನಸಿಗೆ ಕನಸುಗಳನ್ನು, ಭವ್ಯ ಆಶಯಗಳನ್ನು ಹಾಗು ಬದುಕುವ ಹುರುಪನ್ನು ತುಂಬಿಸುತ್ತವೆ, ಸುರಂಗದ ತುತ್ತತುದಿಯ ಬೆಳಕಿನಂತೆ..!
ಹೀಗೆ ನಿನ್ನ ಸಾಗಲಿ ಕನಸು-ಕವನಗಳ ಜಾತ್ರೆ! ಹಾದಿಯ ಕಲ್ಲುಗಳು ಕೊನರಿ ಹೂವಾಗಲಿ! ಬದುಕು ಹಾಡಾಗಲಿ!

ಮನಸ್ವಿನಿ said...

ನಮಸ್ಕಾರ ಶ್ರೀ,

ಹಾಡನ್ನು, ಕಲ್ಪನೆಯನ್ನು ಮೆಚ್ಚಿಕೊಂಡಿದ್ದಕ್ಕೆ ಹಾಗೂ ಹಾರೈಕೆಗೆ ಧನ್ಯವಾದಗಳು.

ಮನಸ್ವಿನಿ said...

ಪ್ರಮೋದ್,


ಧನ್ಯವಾದಗಳು :) ಸಂಕಲನ !!!! ನೋಡುವ ;)

ಮನಸ್ವಿನಿ said...

ವಿಜೇಂದ್ರ,

ಹಾಡು ಚೆನ್ನಾಗಿತ್ತಾ? ಧನ್ಯೆ! ಆತ್ಮಕಥೆ! ಇಲ್ಲಪ್ಪ ..ಕಥೆ ಬರಿಯೊದೆ ನಂಗೆ ಕಷ್ಟ :)

ಮನಸ್ವಿನಿ said...

ಶಿವ್,

ಹಾರೈಕೆಗೆ ಧನ್ಯವಾದಗಳು :)

ಮನಸ್ವಿನಿ said...

ಮಹಾಂತೇಶ್,

ತುಂಬಾ ಧನ್ಯವಾದಗಳು .

ಮನಸ್ವಿನಿ said...

ವೇಣು ವಿನೋದ್,

" ಕತ್ತೆಲಯಲ್ಲಿ ಎಷ್ಟೋ ನವಿರು ಕನಸುಗಳನ್ನ ಕಂಡಿರಬಹುದು,ಆ ಕನಸಲೆಲ್ಲಾ ಹೂವಿನ ಹಾದಿಗಳನ್ನೆ ಕಂಡಿರುವೆ.ಆದ್ರೆ,ಆ ಕನಸುಗಳೆಲ್ಲ ಮನಸ್ಸನ್ನು ಮುದಗೊಳಿಸಿದ್ವೇ ವಿನಃ ಹುರುಪು ,ಛಲ ತುಂಬೆ ಇಲ್ಲ.ಇಂದು ಕಣ್ಣು ಬಿಟ್ಟು ನೋಡ್ತಾ ಇರೊ ಕನಸು ಆ ತರ ನವಿರಾದದ್ದಲ್ಲ, ಎನನ್ನೊ ಸಾಧಿಸಬೇಕು ಅನ್ನೊ ಛಲ ತುಂಬ್ತಾ ಇದೆ,ಈ ಕನಸಲ್ಲಿ, ಹೂವಿನ ಹಾದಿಯಿಲ್ಲ, ಹಾದಿಯಿದೆ ಅಷ್ಟೆ "--- ಇದು ನನ್ನ ಹಾಡಿನ ಸಾರಂಶ..ತುಂಬಾ ತಲೆ ತಿಂದೆ ಅನ್ಸುತ್ತೆ :)

ಧನ್ಯವಾದಗಳು.

ಮನಸ್ವಿನಿ said...

ಭಾವಜೀವಿ,

"ತಾನೂ ಬೆಳೆದು, ನನ್ನಂತವರನ್ನೂ ಬೆಳಸುತ್ತಿರುವ ನಿನ್ನ ಈ ಕನಸಿನ ಕೂಸಿನ ಹುಟ್ಟು ಹಬ್ಬಕ್ಕೆ ನನ್ನ ಶುಭಾಶಯಗಳು! " ತುಂಬಾ ದೊಡ್ಡ ಮಾತು ..ತುಂಬಾ ಧನ್ಯವಾದಗಳು ನಿಂಗೆ.

Anveshi said...

ಕಣ್ಣು ಮುಚ್ಚಿದ ತಕ್ಷಣವೇ ಕಾಣುವ ಕನಸು ನನಸಾಗಲಿ....
ಹುಟ್ಟು ಹಬ್ಬಕ್ಕೆ ಪಾರ್ಟಿ ದೊರೆಯಲಿ...
ನಾವೂ ಭರ್ಜರಿ ತಿನ್ನುವಂತಾಗಲಿ....

ರಾಧಾಕೃಷ್ಣ ಆನೆಗುಂಡಿ. said...

ಕನಸುಗಳನ್ನು ಕಟ್ಟಿಡಲು ನೀವು ಯಾಕೆ ಪ್ರಯತ್ನಿಸುವುದಿಲ್ಲ. ಕನಸುಗಳ ಬಗ್ಗೆ .......... ಚೆನ್ನಾಗಿತ್ತು.
ಹುಟ್ಟು ಹಬ್ಬದ ಶುಭಾಶಯ ನಿಮಗಲ್ಲ.........

Jagali bhaagavata said...

ಮುಂದೆನ್ನ ಕಥೆ ಬರೆಯುವ
ಸರಳ ಕನಸಷ್ಟೆ!

ನಿನ್ನ ಕಥೆಗಾಗಿ ಕಾಯುತ್ತಿದ್ದೇನೆ. ಕವನಗಳು ಬೇಸರ ಬಂತಾ ಹೇಗೆ?

ಹುಟ್ಟುಹಬ್ಬದ ಶುಭಾಶಯಗಳು. ಆದಷ್ಟು ಬೇಗ ಭೂರಿಭೋಜನ ವ್ಯವಸ್ಥೆಯನ್ನ ಏರ್ಪಡಿಸು

ಮನಸ್ವಿನಿ said...

ಅನ್ವೇಷಿಗಳೆ,
ಧನ್ಯವಾದಗಳು..ಪಾರ್ಟಿ!! ಅಂದ್ರೆ ಏನು? :)

ಮನಸ್ವಿನಿ said...

ರಾಧಾಕೃಷ್ಣರವರೆ,
ಕನಸುಗಳನ್ನ ಕಟ್ಟಿಡುವ ಪ್ರಯತ್ನ ! ಕಷ್ಟವಾಗಬಹುದೇನೊ :)

ಮನಸ್ವಿನಿ said...

ಭಾಗವತ,
ಕವನಗಳು ಬೇಸರ ಬರುವುದಾ!! ಇಲ್ಲ
ಕಥೆ ಬರೆಯುವುದಾ! ಕಷ್ಟ ನನಗೆ :)
ಧನ್ಯವಾದಗಳು..ಬರಿ ತಿನ್ನೋದರ ಯೋಚನೆ ಯಾಕೆ ನಿಂಗೆ ?