Monday, July 14, 2008

ಖಾಲಿ ಕ್ಯಾನ್ವಾಸ್

ಮನೆಯ ಮೇಲೆ ಮನೆಗಳು
ಆಕಾಶ ಮುಟ್ಟುವಂತೆ
ಅಂಗಳ , ಹಿತ್ತಲು?
ಎಲ್ಲ ನುಂಗಿಯಾಗಿದೆ
ಈಗ ಬಿ.ಎಚ್.ಕೆ ಅಮಲು

ನೆರೆಹೊರೆಯಲ್ಲಿ ಯಾರು?
ಅವೆಲ್ಲ ಬರಿಯ ಹೊರೆ
ತಂದೆ ತಾಯಿ?
ಊರಲ್ಲಿಹರು..
ಕಾಸು ಕಳಿಸುತ್ತೇವೆ

ಮಧ್ಯಾಹ್ನದಲ್ಲಿ
ಹನಿನೀರು, ಮೂರು ತುತ್ತೆಂದು
ಬಂದೀರಿ ಜೋಕೆ!
ಬೆಳಿಗ್ಗೆ ಜಡಿದ ಬೀಗಕ್ಕೆ
ಚಂದ್ರೋದಯದ ಮೇಲೆ ಬಿಡುಗಡೆ

ಗಿಡ ಮರ ಬಳ್ಳಿ ಹೂವು?
ಓಹೋ ಕುಂಡಗಳಿವೆ
ಬಣ್ಣದ ಗಿಡ
ಪೇಪರ್ ಹೂವು
ಎಲ್ಲ ಫಾರಿನ್ ಸಾಮಾನು

ಕಟ್ಟಿಟ್ಟ ಉಸಿರು
ಪರದೆಯೊಳಗಿನ ಪ್ರಪಂಚ
ಪುರುಸೊತ್ತಿಲ್ಲ
ಇದ್ದಿದ್ದರೆ ಅಲ್ಲೇ...
ಯಾಕೆ ಬಿಡಿ...

ಆ ಮಾಲ್, ಈ ಮಾಲ್
ಆ ಸಿನೇಮಾ, ಈ ಹೋಟೆಲ್
ಪುಸ್ತಕದ ಪಿ.ಡಿ.ಎಫ್
ಒಂದಿಷ್ಟು ಕರೆಗಳು
ಕೊನೆಯೆರಡು ದಿನಗಳು

ಊರ ಹೊರವಲಯದಲಿ
ತುಂಡುಭೂಮಿಗಾಗಿ
ಮೈಮೇಲೆ ಸಾಲದ ಗಾಯ;
ಉಪ್ಪು ಮೆತ್ತಿದ ಹಾಗೆ
ಇನ್ನೊಂದೆರಡು ಇಎಂಐ

ಹಸಿರು ಉಸಿರು, ಗಾಳಿ ಗಂಧ?
ಹಕ್ಕಿ ಪಕ್ಕಿ, ಬೆಟ್ಟ ಬಯಲು?
ನದ ನದಿ ಕಡಲ ಮಡಿಲು?
ಹೌದಲ್ಲ! ಬಹಳ ತಿಂಗಳಾದವಲ್ಲ
ಪ್ರವಾಸವಿಲ್ಲ

ನೆಮ್ಮದಿಯ ಬಾಳೆಂದು?
ಇನ್ನೊಂದೆರಡು ಸಲ
ಭೂಮಿಯ ಆ ತುದಿಗೆ ಹೋಗಿ
ಬಂದರೆ , ಎರಡು ಕಾಸು ತಂದರೆ
ಖಂಡಿತ ಖಂಡಿತ...ನೆಮ್ಮದಿ

27 comments:

ಶಾಂತಲಾ ಭಂಡಿ (ಸನ್ನಿಧಿ) said...

ಮನಸ್ವಿನಿ...
ಯಾವ ಸಾಲನ್ನಂತ ಹೊಗಳೋದು! ಎಲ್ಲವೂ ಚಂದವೇ. ಮನ ನಾಟುವಂತಿವೆ. ಪ್ರತಿಯೊಬ್ಬನ ಮನ ಹೊಕ್ಕು ಬರೆದಂತ ಕವಿತೆ, ಪ್ರತಿಯೊಬ್ಬನಿಗಾಗಿ ಬರೆದಿರುವಂತೆ. ಇಂತ ಸಾಲುಗಳನ್ನು ನೀನು ಹೀಗೆ ಬರೆದಾಗ ನೆಮ್ಮದಿ. ನಮ್ಮೊಳಗಿನ ತುಮುಲಗಳೂ ಇಲ್ಲೂ ಇವೆಯಲ್ಲ ಅಂತ.

Anonymous said...

ಕವನ ಸೂಪರ್ :) .. ಓದಿಯಾದ ಮೇಲೆ ನಾನು ಅಂತದ್ದೆ ಒಂದು ಬಿ ಹೆಚ್ ಕೆ ನಲ್ಲಿ ಅದೆ ಯೋಚನೆನಲ್ಲಿ ಇರೋದ್ ನೆನೆಸಿ :(

ಗುರು

Unknown said...

ತುಂಬಾ ಚೆನ್ನಾಗಿದೆ. ಎಲ್ಲಾ ಸಾಲುಗಳೂ.

ಭಾವಜೀವಿ... said...

ಸೂಪರ್...!!
ಕಾಂಕ್ರೀಟ್ ಕಾಡಿನಲ್ಲಿ ನಾವೂ ಒಂದು ನಡೆದಾಡುವ ಕಟ್ಟಡವಾಗುವ ಮೊದಲು ಎಚ್ಚರಗೊಳ್ಳಬೇಕಿದೆ...

Anonymous said...

ನಲವತ್ತೈದು ಸಾಲುಗಳು
ನಲವತ್ತೈದು ವರುಷಗಳ ಬದುಕಿನಂತಿದೆ..
ಮಹಾನಗರಿಗರ ಬದುಕನ್ನೇ ಕಟ್ಟಿಕೊಟ್ಟಿದ್ದೀರಿ.
ಹಳ್ಳಿಯ ನಮ್ಮ ಜನತೆಗೆ ಕವಿತೆ ಓದಿ ಪಿಚ್ಚೆನ್ನಿಸಬಹುದು.
ಕಠೋರ ಸತ್ಯ:ನವಿರಾದ ಪದ್ಯ!
Good efforts
-ರಾಘವೇಂದ್ರ ಜೋಶಿ.

Manu said...

ತುಂಬಾ ಚೆನ್ನಾಗಿದೆ...
ನಮ್ಮ ಮನಸ್ಥಿತಿಯನ್ನು ಹಾಗೆ ಸಾಲುಗಳಲ್ಲಿ ಬಿಂಬಿಸಿದ್ದೀರ...

ಈ ಝಂಝಾಟದಿಂದ ಹೊರ ಬರಲು ಏನು ಮಾಡಬೇಕೋ ಆ ದೇವರೇ ಬಲ್ಲ!!!!

ಸಿಂಧು sindhu said...

ಸು-ಮನಸ್ವಿನೀ..

ಒಳ್ಳೆಯ ಕವಿತೆ. ಇಷ್ಟವಾಯಿತು.


ಪ್ರೀತಿಯಿಂದ
ಸಿಂಧು

MD said...

ಹೆಸರೇ ಮನಸ್ವಿನಿ. ನಮ್ಮೆಲ್ಲರ ಮನಗಳನ್ನು ಮೆದುಳನ್ನು ಹೊಕ್ಕಿ ವಿಚಾರಗಳನ್ನು ಕದ್ದು ಪದ್ಯ ಬರೆದಿದ್ದೀರಾ.ಇದರ ಕಾಪಿ ರೈಟ್ಸ್ ನಮಗೇ ಕೊಡಬೇಕು.

ಪ್ರಸ್ತುತ ಪರಿಸ್ಥಿತಿಯ ಸರಳವಾದ ಚಿತ್ರಣ. ಮನುಷ್ಯ ಆಸೆಯೆಂಬ ಬಿಸಿಲುಕುದುರೆ ಏರಿದ್ದು ನಿಮ್ಮ ಕೊನೆಯ ಪ್ಯಾರಾದಲ್ಲಿ ಚೆನ್ನಾಗಿ ಮೂಡಿಬಂದಿದೆ.

ವಿ.ರಾ.ಹೆ. said...

ಕವನ ಚೆನ್ನಾಗಿದೆ ಎಂದ ಮರುಕ್ಷಣವೇ ಚೆನ್ನಾಗಿರುವುದು ಕವನವೋ ಅಥವಾ ಅದರಲ್ಲಿ ಮೂಡಿದ ಈ ಬದುಕಿನ ಚಿತ್ರಣವೋ ಎಂದು ಪಿಚ್ಚೆನಿಸುತ್ತದೆ.

ಹ್ಮ್... ವಿಪರ್ಯಾಸ.. ಅನಿವಾರ್ಯ

Anonymous said...

ಖಾಲಿ ಕ್ಯಾನ್ವಾಸ್ ನ ಮೇಲೆ ಬಿಡಿಸಿದ ಬಣ್ಣಗಳು ಇಷ್ಟವಾದವು. ಚೆಂದದ ಸಾಲುಗಳು.
-ಜಿತೇಂದ್ರ

ತೇಜಸ್ವಿನಿ ಹೆಗಡೆ said...

ಮನಸ್ವಿನಿ,

ಸುಂದರ ಕವನ.. ಮನಸ್ಸೊಳಗೆ ಹೊಕ್ಕು ಖಾಲಿಯಾಗಿಸುವ ಸಾಲುಗಳು.

Pramod P T said...

ಎಲ್ಲಾ ನಾವೇ ಮಾಡ್ಕೊಂಡಿರೊದಲ್ವಾ...ಎನೂ ಮಾಡೊಕ್ಕಾಗಲ್ಲಾ!

ಕವನದ concept ಚೆನ್ನಾಗಿದೆ.

sunaath said...

ಈವತ್ತಿನ ಬದುಕಿನ ಚಿತ್ರಣ ಯಥಾವತ್ತಾಗಿ ಬಂದಿದೆ.

Sree said...

hmm...nice

ಸಿಮ್ಮಾ said...

ವಿಷಾದಿಸುತ್ತೇನೆ, ನೀವು ಬರೆದದ್ದಕ್ಕಲ್ಲ, ನಾನು ಓದಿದ್ದಕ್ಕೂ ಅಲ್ಲ, ಬದಲಾಗಿ ನೀವು ಹಾಗೆ ಬರೆಯ ಬೇಕಾಗಿ ಬಂದದ್ದಕ್ಕೆ. ಆದರೆ ಹಾಗೇ ಪರಿಶೀಲಿಸಿ ನೋಡಿ ಈ ರೀತಿಯ ಜೀವನವೂ ಕೂಡ ಅನಿವಾರ್ಯವಾಗಿ ಬಿಟ್ಟಿದೆಯೆನೋ ಅಂತ ಅನಿಸೋಲ್ವಾ? ಆದ್ರೆ ಒಂದಂತೂ ನಿಜ ನಾವು ಅವಗವಾಗ ಅದರಿಂದ ಹೊರಬಂದು ನಮ್ಮನ್ನು ನಾವು ಕಂಡು ಕೊಳ್ಳುವುದರ ಜೊತೆಗೆ ನಮ್ಮನ್ನು ನಾವು ರೀಛಾ್ಜ್ ಮಾಡಿಕೊಂಡರೆ ಒಳ್ಳೆಯದು. ಇಲ್ಲದಿದ್ದರೆ ಇದರಲ್ಲೇ ಎಲ್ಲೋ ನಮ್ಮನ್ನ ನಾವೇ ಕಳೆದು ಕೊಳ್ಳುತ್ತೇವೆ.

Unknown said...

ಅಹಾಹಾಹಾ! ಬಹಳ ಸೊಗಸಾಗಿದೆ
ಪ್ರಸ್ತುತ ಏಕಾಣು ಜೀವನದ ಪರಿಯನ್ನು ಕನ್ನಡಿಯಲ್ಲಲ್ಲದೇ ಕಣ್ಮುಂದೆಯೂ ಇಟ್ಟು ತೋರಿಸಿದ್ದೀರಿ

ಮೊದಲ ತುಣುಕಿನ ಕೊನೆಯ ಭಾಗದಲ್ಲಿ ನಮೂದಿಸಿರುವ ಬಿ.ಎಚ್.ಕೆ ಎಂದ್ರೇನು?

ನೆಮ್ಮದಿಯ ಬಾಳೆಂದು?
ಇನ್ನೊಂದೆರಡು ಸಲ
ಭೂಮಿಯ ಆ ತುದಿಗೆ ಹೋಗಿ
ಬಂದರೆ , ಎರಡು ಕಾಸು ತಂದರೆ
ಖಂಡಿತ ಖಂಡಿತ...ನೆಮ್ಮದಿ

ಇದೀಗ ಅನುಭವಕ್ಕೆ ಬಂದ ಮಾತಲ್ಲವೇ :D

ಸಂತೋಷಕುಮಾರ said...

ಅನಿವಾರ್ಯ ಅಲ್ವಾ ಆ ಬದುಕು. ನಮ್ಮೆ ದುರಿನ ಆಯ್ಕೆಗಳು ಸೀಮಿತವಾಗಿವೆ ಅಂತಾ ಅನಿಸುತ್ತದೆ ಇಲ್ಲವೇ ಹೊಸ ಅಯ್ಕೆಯನ್ನು ಸೃಷ್ಟಿಸಲು ಅಥವಾ ಎದಿರುಗೊಳ್ಳಲು ಧೈರ್ಯ್ವವಿಲ್ಲದೆಯೂ ಇರಬಹುದು. ಬಂದಂಗೆ ಚಕ್ಕಡಿ ಹೊಡೆದುಬಿಡ್ತಿವಿ. ನಮ್ಮಲ್ಲಿ ಬಹೂತೇಕರಿಗೆ ಅನ್ವಯವಾಗುತ್ತೆ ನಿಮ್ಮ ಕವನ. ಭಾಳ ಚಂದ ಬರೆದೀರಿ..

VENU VINOD said...

ನಾವೇ ಕಟ್ಟಿಕೊಂಡ ಕೋಟೆಯಲ್ಲಿ ನಾವೇ ಸಿಲುಕಿಕೊಂಡಿದ್ದೇವೆ. ದ್ವಂದ್ವದಲ್ಲಿ ಬದುಕು ಕಳೆದು ಹೋಗುತ್ತದೆ. ನಗರದ ಮಂದಿಯ ಮನದಲ್ಲಿರುವುದನ್ನು ಚೆನ್ನಾಗಿ ಅಭಿವ್ಯಕ್ತಿಸಿದ್ದೀರಿ.

jomon varghese said...

ಬ್ಯೂಟಿಪುಲ್!

ag_theone said...

ondu hantada nantara yaava reetiya baduku beku annuvadanna aarisikollo shakti nammalliye ide allave?

Susheel Sandeep said...

ಥಾಟ್ ಪ್ರೊವೋಕಿಂಗ್!
ಅಕ್ಷರಾಕ್ಷರಗಳೂ ಸತ್ಯವನ್ನೇ ಸತ್ಯದ ತಲೆ ಮೇಲೆ ಹೊಡೆದು ಹೇಳುತ್ತಿವೆ! ತುಂಬಾನೆ ಇಷ್ಟವಾಯ್ತು....

ಮನಸ್ವಿನಿ said...

ಸ್ಪಂದಿಸಿದ ಎಲ್ಲರಿಗೂ ಧನ್ಯವಾದಗಳು.

ರಾಘವೇಂದ್ರ ಜೋಶಿಯವರೇ, ಮನು,ಸಿಮ್ಮಾ ಬ್ಲಾಗಿಗೆ ಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.

Unknown said...

ಮನಸ್ವಿನಿ ಅವರೇ...ಕವನ ನಿಜಕ್ಕೂ ತುಂಬಾ ತುಂಬಾನೇ ಚೆನ್ನಾಗಿ ಮೂಡಿ ಬಂದಿದೆ.ನಿಮ್ಮ ಮನಸಿನ ಕಲ್ಪನೆ..ಇರುವ ವಾಸ್ತವ್ಯತೆಯನ್ನು, ಒಂದು ಉತ್ತಮ ಕವನವನ್ನಾಗಿಸಿದೆ.
ನಿಮಗೆ ವಂದನೆಗಳು,
ಸುನಿಲ್ ಮಲ್ಲೇನಹಳ್ಳಿ

MD said...

ನಿಮ್ಮ ಕ್ಯಾನ್ವಾಸಿನಲ್ಲ ಏನೂ ಮೂಡಿಯೇ ಇಲ್ಲಾ ಒಂದು ತಿಂಗಳಿಂದ!

Parisarapremi said...

huttidaaginda nu, maneyavara jothe ne, idE "chakra kattikondu tirgO" ooralle irO nanage nimma kavitheyalliruva "nOvu" anubhavisi gottilla, aadre nimma haage anEkaranna nODideeni..

aadarenu, nadiya haage hareethaa irbekallaa baduku antha ansutte.. bahushaha aa jaagadalli irOrige ashte adu nijavaagluu mana muttOdu..

sundara kavithe.. :-)

ಮನಸ್ವಿನಿ said...

ಸುನೀಲರೇ,
ಬ್ಲಾಗಿಗೆ ಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.

ಪರಿಸರಪ್ರೇಮಿ,
ಬ್ಲಾಗಿಗೆ ಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದಗಳು.
ಆದರೂ ಚಕ್ರದ ವೇಗ ತುಸು ಜಾಸ್ತಿ ಆಗಿದೆ ಅಂತ ನಿಮಗೆ ಅನ್ನಿಸಿಲ್ವಾ? :)

md,
:)

Anonymous said...

ನಗರಜೀವನದ ಒತ್ತಡವನ್ನ ಚೆನ್ನಾಗಿ ಕವನವಾಗಿಸಿದ್ದೀರಿ . . .ನಮ್ಮದೇ ಬದುಕಿನ ಪ್ರತಿಬಿಂಬದಂತಿದೆ .ಇಷ್ಟವಾಯಿತು.