Monday, March 10, 2008

ಬೇಲಿ

ಬೇಲಿಯಾಚೆಗಿನ ಲೋಕ
ವಿಭಿನ್ನ,ವಿಚಿತ್ರ
ಎಲ್ಲರದೂ ಓಟವಿಲ್ಲಿ
ಎತ್ತ, ಯಾಕೆ?
ಊಹೂಂ..ಗೊತ್ತಿಲ್ಲ
ಬೇಲಿ ದಾಟಿ ಬಂದಾಗಿದೆ
ಓಡಲೇಬೇಕು ಇಲ್ಲಿರಲು
ನನ್ನದೊಂದು ಓಟ
ಮುಂದಿನವರ ಹಿಂದೆ
ಆದರೆಷ್ಟು ದೂರ?
ಎಲ್ಲಿಯವರೆಗೆ?
ಯಾವುದರ ಹುಡುಕಾಟ?
ಉತ್ತರವಿಲ್ಲದ ಪ್ರಶ್ನೆಗಳು
'ತಾನು, ತನ್ನದು'
ಎಲ್ಲರೊಳಗಣ ಇದೇ ಭಾವ
ನಿಧಾನಿಸಿದವರಿಗೆಲ್ಲ
ಹಿಂದಿನವರ ಗುದ್ದು
ಬಿದ್ದವರನೆತ್ತುವವರಿಲ್ಲ
ಹತ್ತಿ ಮುಂದೋಡುವ
ಕಾಲುಗಳ ಸಾಲು.
ನಾನು ಓಡುತ್ತಲಿದ್ದೇನೆ
ಬಲ ಇಳಿದಿದೆ;ಸಾಕೆನಿಸಿದೆ
ಭಾವಗಳು ಎಚ್ಚರಗೊಂಡಿವೆ
ಬೇಲಿಯ ಹೊರಗಿನಲೋಕ
ಕೈ ಬೀಸುತ್ತಿದೆ; ಕರೆಯುತ್ತಿದೆ
ಬೇಲಿಯವರೆಗೆ ಹೋಗಲು
ಸಹಾಯ ಬೇಕಿದೆ
ಅಳುತ್ತೇನೆ ಮಗುವಿನಂತೆ
ನಿಧಾನಿಸುತ್ತೇನೆ;ಬೀಳುತ್ತೇನೆ
ಹತ್ತಿ ಹೋದವರು ಹಲವರು
ಮತ್ತೆ ನಾನು ಏಳುವ ಲಕ್ಷಣಗಳಿಲ್ಲ


20 comments:

sunaath said...

ಮನಸ್ವಿನಿ,
ಇದೇ ನಿಜವಾದ ಜಗತ್ತು, ನಿಜವಾದ ಜೀವನ. ಭಾವನೆಗಳ ಅಭಿವ್ಯಕ್ತಿ ಸೊಗಸಾಗಿದೆ. ಆದರೆ ಬೇಲಿ ಎನ್ನುವದು ಭ್ರಮೆ ಅನ್ನುವದನ್ನು ಪ್ರತಿಯೊಬ್ಬನೂ ಅರಿತುಕೊಳ್ಳಲೇಬೇಕಲ್ಲವೆ?

ಬಾನಾಡಿ said...

ಕವನ ಉತ್ತಮವಾಗಿದೆ.
ಮುಂದಿನವರ ಹಿಂದೆ, ಆದರೆಷ್ಟು ದೂರ
ಹಿಂದಿನವರ ಗುದ್ದು
ಬಿದ್ದವರನೆತ್ತುವವರಿಲ್ಲ

ಒಳ್ಳೆಯ ಕಾವ್ಯ ಪ್ರತಿಮೆಗಳು.
ಅಭಿನಂದನೆಗಳು.
ಬಾನಾಡಿ

ಅನಂತ said...

ತುಂಬಾ ಚೆನ್ನಾಗಿದೆ.. :) ಇವತ್ತಲ್ಲ ನಾಳೆ ಬೇಲಿಯನ್ನ ದಾಟಲೇಬೇಕು ಅನ್ನುವುದೊಂದು ಮನಸ್ಸಿನಲ್ಲಿ ಇದ್ರೆ ಸಾಕು, ಖಂಡಿತವಾಗಿ ದಾಟಬಹುದು.. :)

Anveshi said...

ಪಾಪ..

ಜೀವನದಲ್ಲಿ ಏಳೋದು, ಎಡವಿ ಬೀಳೋದು ಇದ್ದದ್ದೇ...

ಬಿದ್ದರೆ ತಕ್ಷಣವೇ ಎದ್ದು ನಿಂತು.... ಹಿಂದಿರುಗಿ ನೋಡಿ.... ಗಟ್ಟಿಯಾಗಿ ಕೇಳಿ....

"ಯಾರದು ನನ್ನನ್ನು ತಳ್ಳಿದ್ದು?" ಅಂತ...

----
ಕವನ ಗಮನ ಸೆಳೆಯಿತು. ಬೇಲಿಯಾಚೆಗಿನ ಲೋಕ ಬಹುಶಃ ಇಂದಿನ ಆಧುನಿಕ ಜೀವನದ ಕುರುಹಾಗಿರಬಹುದೇ?

ನಾವಡ said...

ಚೆನ್ನಾಗಿದೆ ಕವನ. ವಿಷಾದವೂ ಬದುಕಿನ ಪ್ರಮುಖ ರಸ-ನೆಲೆ.ಹಿಂದಿನ ನಾನೊಬ್ಬ ಬದುಕಿದ್ದರೆ ಸಾಕೆಂಬ ಹಪಾಹಪಿ ಮನೋಭಾವದಲ್ಲಿ ತಾನು ಗೆಲ್ಲುವುದಕ್ಕಿಂತ ಇನ್ನೊಬ್ಬರು ಗೆದ್ದಾರೆಂಬ ಆತಂಕಿತರೇ ಹೆಚ್ಚು.
ವಿಷಾದ ಮತ್ತೊಂದು ಹೊಸತಿಗೆ ಕಾರಣವಾದೀತು...
ಕವನದಲ್ಲಿ ಕೆಲವು ಚಿತ್ರಿಕೆಗಳು ಇಷ್ಟವಾದವು.

MD said...

ಹ್ಮ
ಮನಸ್ವಿನಿ ಫಿಲಾಸೊಫಿಕಲ್ ಆಗುತ್ತಿದ್ದಾರೆ.
ಹುಟ್ಟು-ಜಗತ್ತು-ಜೀವನ-ಕಾರಣ-ಕಳೆದುಕೊಂಡಿದ್ದು-ಪಡೆದಿದ್ದು.
ಒಟ್ಟಾರೆ ನಾನ್ ಸ್ಟಾಪ್ ಹಾಡು ಚೆನ್ನಾಗಿದೆ.
ಬೇಲಿಯಾಚೆಯೂ ಇದೇ ತರಹದ ಜೀವನ ಎಂಬುದೊಂದಿದ್ದರೇ!?

Anonymous said...

ವಿಷಯ ಯಾವುದೇ ಇರಲಿ, ಒಂದು ಒಳ್ಳೆಯ ಕವಿತೆ ಓದಿದಾಗ ಮನಸ್ಸು ಮುದಗೊಳ್ಳುತ್ತದೆ. ಈ ಕವಿತೆ ಖಂಡಿತ ಅಂತಹ ಮುದ ನೀಡಿತು. ಓದಿ ಸಂತೋಷವಾಯಿತು.

ಜೊತೆಗೆ, ಒಂದಿಷ್ಟು, ಕಾಲೆಳೆಯಬೇಕು ಅಂತ ಮನಸ್ಸಾಗ್ತಾ ಇದೆ....ಅದಕ್ಕೆ ಮುಂದಿನ ಸಾಲುಗಳು....:)You can delete this after you read them.

೧. 'ಹಾಡು'? ಹೊಸ ಅರ್ಥಗಳ ರೂವಾರಿ ಮನಸ್ವಿನಿ :)
೨. "ಬೇಲಿವರೆಗೆ ಹೋಗಲು" ಬದಲು "ಬೇಲಿಯವರೆಗೆ ಹೋಗಲು" ಮಾಡಿದರೆ?
೩. "ಹತ್ತಿ ಹೋದವರು ಹಲವರು" ಸಾಲನ್ನು, "ಸಹಾಯ ಬೇಕಿದೆ" ಎನ್ನುವ ಸಾಲಿನ ನಂತರ ಹಾಕಿದರೆ?
೪. ಇನ್ನೊಂದು ಪ್ರಶ್ನೆ. "ಹತ್ತಿ ಹೋದವರು" ಎಂದರೆ ಇಲ್ಲಿ "ಮತ್ತೆ ಮರಳಿದವರು" ತಾನೆ? ಹಾಗೇ ಕರೆದರೆ?

ಕವಿತೆ ಸೊಗಸಾಗಿದೆ. ಈ ಬ್ಲಾಗಿನಲ್ಲಿ ಇನ್ನೂ ಇಂತಹ ಉತ್ತಮ ಕವಿತೆಗಳು ಮೂಡಿ ಬರಲಿ.

ಸುಪ್ತದೀಪ್ತಿ suptadeepti said...

ಇಷ್ಟವಾಯ್ತು ಈ ಕವನ. ಚಿತ್ರಿಕೆಗಳು, ಪ್ರತಿಮೆಗಳು ಚೆನ್ನಾಗಿವೆ. ಒಳಾರ್ಥ ನಿಜವಾಗಿಯೂ ಯೋಚನೆಗೆ ಹಚ್ಚುವಂಥದ್ದು. ನಾವೆಲ್ಲರೂ ಈ ಓಟದಲ್ಲಿ ಯಾವುಯಾವುದೋ ಹಂತದಲ್ಲಿ ಸಿಕ್ಕಿಕೊಂಡಿರುವವರೆ, ಅಲ್ವಾ?
ಒಳ್ಳೆಯ ಕವನ. ಇನ್ನೂ ಬರೀ.

Jagali bhaagavata said...

ಚಿಕ್ಕವಳಿದ್ದಾಗ ಬೇಲಿ ಹಾರಿಲ್ವಾ ನೀನು? ಈಗೆಂತಕೆ ಬೇಲಿ ಹಾರುವ ಆಸೆ? ಬೇಲಿಯ ಆಚೆ ಯಾರಿದ್ದಾರೆ? :-)

Chevar said...

very good. Beli haro prayatna chennagide..

Avinash Siddeshware said...

ಮನಸ್ವಿನಿ,
ಕವನ ತುಂಬಾ ಚೆನ್ನಾಗಿದೆ.
ನಾನೀಗ ಬೆಂಗಳೂರಿನಲ್ಲಿರುವುದು. ಆ ಬೇಲಿಯಾಚೆಗಿನ ಲೋಕ ಇದೇನಾ ಅನಿಸುತ್ತಿದೆ.
ನೀವೆನಂತಿರಾ?

ರಾಧಾಕೃಷ್ಣ ಆನೆಗುಂಡಿ. said...

ಬೇಲಿ ದಾಟಿಯಾಗಿದೆಯ? ಅಥವಾ ದಾಟಬೇಕಷ್ಟೇ?

ತೇಜಸ್ವಿನಿ ಹೆಗಡೆ said...

ಮನಸ್ವಿನಿ,

"ಬಿದ್ದವರನೆತ್ತುವವರಿಲ್ಲ"
ಎಂದು ಕೊರಗದೇ, "ಬೇಲಿಗೆ ಹೋಗಲು ಸಹಾಯಕೇಳದೇ", ಇದ್ದಲ್ಲೇ ನಾವು ನಮ್ಮ ಸುತ್ತ ಬೇಲಿಹಾಕಿಕೊಡು ನಿರಾಳರಾಗಿ, ಉಳಿದವರು ಈ ಬೇಲಿಯೊಳಗೆ ಬರಲು ಹಪ ಹಪಿಸುವಂತಾದರೆ ಎಷ್ಟು ಚೆನ್ನ ಅಲ್ಲವೇ?! ಇದೊಂದು ಹುಚ್ಚು ಕಲ್ಪನೆಯೇನೋ?! ---ವಾಸ್ತವಿಕ ನೆಲೆಯಲ್ಲಿ ಕಲ್ಪನೆಗೆಳೆಸುವ ಕವನ ತುಂಬಾ ಚೆನ್ನಾಗಿದೆ.

ಮನಸ್ವಿನಿ said...

ಸುನಾಥರೇ,
ಬೇಲಿ ಭ್ರಮೆಯೋ, ಮನಸ್ಥಿತಿಯೋ! ಗೊತ್ತಿಲ್ಲ. ಧನ್ಯವಾದಗಳು.

ಬಾನಾಡಿ, ಅನಂತ,ನಾವಡರೇ, ಚೇವಾರ್,
ಧನ್ಯವಾದಗಳು. ಬರುತ್ತಿರಿ.

ಅನ್ವೇಷಿ,
ಹ ಹ ಹ...ನಮ್ಮ ವೇಗವೇ ನಮ್ಮನ್ನು ಬೀಳಿಸಿದರೆ? ಆಧುನಿಕ ಜೀವನದ ಕುರುಹು? ಇರಬಹುದು :). ಧನ್ಯವಾದಗಳು.

md,
Philosophy? -- ಹಾಗಂದ್ರೆ? ;)
ಬೇಲಿಯಾಚೆ ಈ ತರಹದ ಜೀವನ ಇಲ್ಲ ಎನ್ನುವ ಆಶಾಭಾವ :)
ಧನ್ಯವಾದಗಳು.

DS,
:)
೧.ಹೊಸ ಅರ್ಥಗಳ ರೂವಾರಿ? - ಇಲ್ಲೇನೋ ಕೇಳಿಸ್ತಾ
ಇದೆ :)
೨. "ಬೇಲಿವರೆಗೆ ಹೋಗಲು" ಬದಲು "ಬೇಲಿಯವರೆಗೆ ಹೋಗಲು" ಮಾಡಿದರೆ?-- ಮಾಡ್ತೇನೆ.
೩, ೪ - ಹತ್ತಿ ಹೋದವರು ಅಂದ್ರೆ-- ಬಿದ್ದ ನನ್ನ ಮೇಲೆ ಹತ್ತಿ ಹೋದವರು ಅಂತ. ಸಾಲಿನ ಸ್ಥಾನ ಸರಿ ಇದೆ ಅಂತ ಅನ್ಸುತ್ತಾ ಈಗ?
ಸ್ಪಂದನಕ್ಕೆ ಧನ್ಯವಾದಗಳು. ಬರುತ್ತಿರಿ.

ಸುಪ್ತದೀಪ್ತಿ,
"ನಾವೆಲ್ಲರೂ ಈ ಓಟದಲ್ಲಿ ಯಾವುಯಾವುದೋ ಹಂತದಲ್ಲಿ ಸಿಕ್ಕಿಕೊಂಡಿರುವವರೆ" - ಹೌದು. ಧನ್ಯವಾದಗಳು. :)

ಭಾಗವತ,
:) ಬೇಲಿಯಾಚೆ ಒಂದು ಪುಟ್ಟ ಪ್ರಪಂಚ.

ಅವಿನಾಶ್,
ಸ್ವಾಗತ.ಪ್ರತಿಕ್ರಿಯೆಗೆ ಧನ್ಯವಾದಗಳು. ಬೆಂಗಳೂರು, ಬೇಲಿಯಾಚಿನ ಲೋಕ -ಹೌದು ಮತ್ತು ಅಲ್ಲ :). ಬರುತ್ತಿರಿ.

ರಾಧಾಕೃಷ್ಣ,
ದಾಟಬೇಕು :) ಧನ್ಯವಾದಗಳು.

ತೇಜಸ್ವಿನಿ,
"ಇದ್ದಲ್ಲೇ ನಾವು ನಮ್ಮ ಸುತ್ತ ಬೇಲಿಹಾಕಿಕೊಡು ನಿರಾಳರಾಗಿ, ಉಳಿದವರು ಈ ಬೇಲಿಯೊಳಗೆ ಬರಲು ಹಪ ಹಪಿಸುವಂತಾದರೆ ಎಷ್ಟು ಚೆನ್ನ ಅಲ್ಲವೇ?! " -- ಇರಬಹುದೇನೋ. ಹುಚ್ಚು ಕಲ್ಪನೆ ಅಲ್ಲ. :)
ಧನ್ಯವಾದಗಳು.

ಪೂರ್ಣ ವಿ-ರಾಮ said...

ಕವಿತೆ ಕವಿತೆ ನೀನೇಕೆ ಪದಗಳಲಿ ಅವಿತೆ....



ಸಾಲುಗಳು ಹಂಬ್ಲಾತು.
ಬರವಣಿಗೆಯಲ್ಲಿ ಬಹೊತ್‌ ಮೊಹಾಬ್ಬತ್ ಇದ್ದು.

ಎಂತೇ ಆದ್ರೂ ಬರಿಯದ್ನ ಮಾತ್ರ ನಿಲ್ಲಸಡ.


ಪ್ರೀತಿಯಿರಲಿ.

ಥ್ಯಾಂಕ್ಯೂ

jomon varghese said...

ನಮಸ್ಕಾರ..

ಒಂದು ಚೆಂದದ ಕವನ.


ಧನ್ಯವಾದಗಳು.

ಜೋಮನ್.

ಮನಸ್ವಿನಿ said...

ಪೂರ್ಣ ವಿ-ರಾಮ,

:) ಆತಪ್ಪ. ಬರ್ತಾ ಇರಿ.


ಜೋಮನ್,

ಧನ್ಯವಾದಗಳು.

bhadra said...

ಒಮ್ಮೆ ಇಟ್ಟ ಹೆಜ್ಜೆ
ಮತ್ತಲ್ಲೇ ಮತ್ತೆ ಇಡಲಾದೀತೇ?
ಅದೇ ಹೆಜ್ಜೆ ಮತ್ತಲ್ಲೇ ಇಡಲಾದೀತೇ?
ಮನ ಹೇಳಿದ್ದು - ಇಡಬಾರದ ಹೆಜ್ಜೆ
ಪಾದ ಮನದ ಮಾತು ಕೇಳೀತೇ?
ಹೆಜ್ಜೆ ಇಡಲು ಶಕ್ತಿ ಕೊಟ್ಟವರಾರು?
ಮನಕೆ ಬುದ್ಧಿಯ ಕೊಟ್ಟವರಾರು?

ಜೀವನದ ಬಗ್ಗೆ ಉತ್ತಮ ವಿಶ್ಲೇಷಣೆ

ಇಲ್ಲಿಯವರೆವಿಗೆ ಸವೆಸಿದ ಹಾದಿಯ ಕಡೆಗೊಮ್ಮೆ
ಹಿಂದಿರುಗಿ ನೋಡಿ! ಏನನ್ನಿಸುತ್ತಿದೆ

ಹೈಲೀ ಮೆಚ್ಯೂರ್ಡ್ ರೈಟಿಂಗ್ ಅನ್ನಿಸ್ತಿಲ್ವಾ?

ವಜ್ರವನ್ನು ಉಜ್ಜಿದಷ್ಟು ಹೊಳಪು ಹೆಚ್ಚುತ್ತದಂತೆ

ಒಳ್ಳೆಯದಾಗಲಿ - ಇನ್ನೂ ಉತ್ತಮ ಬರಹ ಹೊರಹೊಮ್ಮಲಿ

ಗುರುದೇವ ದಯಾ ಕರೊ ದೀನ ಜನೆ

ನಾವಡ said...

ಏನ್ ಮೇಡಮ್, ಹೊಸ ಪೋಸ್ಟ್ ಗೆ ಕಾಯ್ತಾ ಇದ್ದೀವಿ. ಹಾಕೇ ಇಲ್ಲ.ದಯವಿಟ್ಟು ಹಾಕಿ. ಹೀಗೆ ದೂರ ಹೋಗಿ "ವನಸುಮ’ ವೇ ಆಗಿ ಬಿಟ್ಟರೆ ಹೇಗೆ?
ನಾವಡ

ಮನಸ್ವಿನಿ said...

ತವಿಶ್ರೀ ಸರ್,

ಎನೋ ಗೊತ್ತಾಗ್ತಿಲ್ಲ. ನಿಮ್ಮ ಪ್ರೋತ್ಸಾಹಕ್ಕೆ ಚಿರಋಣಿ.

ನಾವಡರೇ,
done :)