Wednesday, April 25, 2007

ಹಾದಿಬದಿಯ ಹೂವು

ಹಾದಿಬದಿಯ ಹೂವು
ಹೆಸರಿಲ್ಲದ ಹೂವು
ಮಡಿಲಲೆ ಹುಟ್ಟಿ ಕರಗುವ ಗಂಧ
ಬಣ್ಣವೋ!ಮಾಸಲು,ಮಂದ
ನಿನ್ನೆ ನಾಳೆಗಳ ಚಿಂತೆ ಇದಕಿಲ್ಲ
ನಗುವುದೊಂದೇ ಧರ್ಮ ದಿನವೆಲ್ಲ
ಸಂಜೆ ಬಾನಿನ ಹೊನ್ನ ಹೊತ್ತಲಿ
ಧಾರಿಣಿಯನಪ್ಪಿದೆ ಮೆಲ್ಲನೆ ಮುತ್ತಲಿ
ಹಾಂ!ಇದು ಹಾದಿ ಬದಿಯ ಹೂವು
ಹೆಸರಿಲ್ಲದ ಹೂವು

Wednesday, April 11, 2007

ಕನಸು

ಕತ್ತಲ ರಾತ್ರಿಯಲಿ,ಹೊದಿಕೆಯ ಒಳಗೆ
ಕಣ್ಣು ಮುಚ್ಚಿ,ನಿದ್ರೆ ಹೋಗಿ
ಕಂಡ ಕನಸುಗಳೆಷ್ಟೊ ;ಹೂವಿನ ಹಾದಿಗಳೆಷ್ಟೊ!
ಬೆಳಗಾಗುವ ಮುನ್ನ,ಕಣ್ಣು ತೆರೆಯುವ ಮುನ್ನ
ಅಳಿಸಿ ಹೋದ,ಹಳಸಿ ಹೋದ
ನವಿರು ಕನಸುಗಳೆಷ್ಟೊ!

ಇಂದಿಲ್ಲಿ ಹಗಲಾಗಿದೆ,ಕಣ್ಣು ತೆರೆದಿದೆ
ಮನದಲ್ಲಿ ಹೊಸತು ಕನಸು
ಹೂವಿನ ಹಾದಿಯೇನಿಲ್ಲ
ಹುರುಪು ತುಂಬಿ,ಛಲವ ಬಿತ್ತಿ
ಮುಂದೆನ್ನ ಕಥೆ ಬರೆಯುವ
ಸರಳ ಕನಸಷ್ಟೆ!

ಅಂದ ಹಾಗೆ ನನ್ನ ಬ್ಲಾಗಿಗೆ ಒಂದು ವರ್ಷವಾಯಿತು. ಉತ್ತೇಜಿಸಿದ,ತಿದ್ದಿದ ,ಪ್ರಶಂಸಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು