Wednesday, January 24, 2007

ಹಳೆಯ ದಾರಿ

ಎಲ್ಲೋ ಸಾಗಬೇಕಿದ್ದ ದಾರಿ
ಮತ್ತೆಲ್ಲೋ ತಿರುವ ತೋರಿ
ಹಳೆಯ ದಾರಿಯಿಂದ ಸರಿದು
ತಿರುವ ಸುತ್ತಿ ಮುಂದುವರಿದು
ಬಹು ದೂರ ಬಂದಾಗ
ಹಿಂದೆ ತಿರುಗಿ ನೋಡಿದಾಗ
ಹಳೆಯದೆಲ್ಲ ನೆನಪಾಗಿ
ಮನಸು ಮತ್ತೆ ಭಾರವಾಗೆ
ನಗುತಲೆ ಮುಂದುವರಿವೆ
ಹಳೆಯ ದಾರಿ ಮುಂದೆ
ಮತ್ತೆ ಸಿಕ್ಕೀತೆಂದು

Thursday, January 04, 2007

ಚುಕ್ಕಿಗಳ ನಡುವೆ

ಬೆಳಗಿನಂಗಳದಲ್ಲಿ
ಸಾಲು ಚುಕ್ಕಿಯನಿಟ್ಟು
ರಂಗೋಲಿ ಇಡುವಾಗ
ಮೊದಲ ಚುಕ್ಕಿಗಳಲ್ಲಿ
ಅವನ ಕಣ್ಣು ಮೂಡಿ
ನನ್ನ ನೋಡುವುದೇಕೆ?

ರೇಖೆಯಾಟದಲ್ಲಿ
ಚುಕ್ಕಿಗಳ ಮೇಲೆ
ಇನ್ನೊಂದು ಗೆರೆಯನೆಳೆಯೆ
ಅವನ ತುಟಿಯು ಮೂಡಿ
ನನ್ನ ನಗಿಸುವುದೇಕೆ?

ಇಬ್ಬನಿಯ ಈ ಹೊತ್ತಿನಲಿ
ನಾ ಬರೆದ ಚಿತ್ರದಲಿ
ಅವನ ಚಂದ್ರ ಮುಖ ಮೂಡಿ
ನನ್ನ ಮನದಾಳದಲಿ
ಬೆಳದಿಂಗಳ ತುಂಬುವುದೇಕೆ?