Monday, March 31, 2008

ಹನಿಗಳು- ೩

ಕತ್ತಲೆಯ ಎಲ್ಲೆಯ
ಹುಡುಕಲು
ಒಂದೆಳೆಯ ಬೆಳಕು
ಕಡಕ್ಕೆ ಬೇಕಿದೆ

***************

ರಾತ್ರಿಗಳಲ್ಲಿ ಕನಸಿನದು
ಮುಗಿಯದ ತಗಾದೆ
ನಿದ್ರೆಯಿಲ್ಲ ನನಗೆ
ಹಗಲಿನಲಿ ಕನಸಿಗೆ
ಭರ್ಜರಿ ನಿದ್ರೆ !

***************

ಲಕ್ಷ ಲಕ್ಷ ಚುಕ್ಕಿ
ಹಾಲುಹುಣ್ಣಿಮೆಯ ಚಂದಿರ
ಊಹೂಂ ಹಗಲಾಗುವುದಿಲ್ಲ
ಸೂರ್ಯನಿಲ್ಲವಲ್ಲ

***************

ಮನಸಿನೊಳಗಿನ
ಕಿರುಹಣತೆಗೆ
ಹೊರಗಿನ ಕತ್ತಲೂ
ಹೆದರಿ ಅಳುತ್ತಿದೆ

( ಹೊಸತಾಗಿ ಏನೂ ಬರೆಯಲಾಗುತ್ತಿಲ್ಲ.ಇವೆಲ್ಲ ಹಳೆಯ ಹನಿಗಳು. )

Monday, March 10, 2008

ಬೇಲಿ

ಬೇಲಿಯಾಚೆಗಿನ ಲೋಕ
ವಿಭಿನ್ನ,ವಿಚಿತ್ರ
ಎಲ್ಲರದೂ ಓಟವಿಲ್ಲಿ
ಎತ್ತ, ಯಾಕೆ?
ಊಹೂಂ..ಗೊತ್ತಿಲ್ಲ
ಬೇಲಿ ದಾಟಿ ಬಂದಾಗಿದೆ
ಓಡಲೇಬೇಕು ಇಲ್ಲಿರಲು
ನನ್ನದೊಂದು ಓಟ
ಮುಂದಿನವರ ಹಿಂದೆ
ಆದರೆಷ್ಟು ದೂರ?
ಎಲ್ಲಿಯವರೆಗೆ?
ಯಾವುದರ ಹುಡುಕಾಟ?
ಉತ್ತರವಿಲ್ಲದ ಪ್ರಶ್ನೆಗಳು
'ತಾನು, ತನ್ನದು'
ಎಲ್ಲರೊಳಗಣ ಇದೇ ಭಾವ
ನಿಧಾನಿಸಿದವರಿಗೆಲ್ಲ
ಹಿಂದಿನವರ ಗುದ್ದು
ಬಿದ್ದವರನೆತ್ತುವವರಿಲ್ಲ
ಹತ್ತಿ ಮುಂದೋಡುವ
ಕಾಲುಗಳ ಸಾಲು.
ನಾನು ಓಡುತ್ತಲಿದ್ದೇನೆ
ಬಲ ಇಳಿದಿದೆ;ಸಾಕೆನಿಸಿದೆ
ಭಾವಗಳು ಎಚ್ಚರಗೊಂಡಿವೆ
ಬೇಲಿಯ ಹೊರಗಿನಲೋಕ
ಕೈ ಬೀಸುತ್ತಿದೆ; ಕರೆಯುತ್ತಿದೆ
ಬೇಲಿಯವರೆಗೆ ಹೋಗಲು
ಸಹಾಯ ಬೇಕಿದೆ
ಅಳುತ್ತೇನೆ ಮಗುವಿನಂತೆ
ನಿಧಾನಿಸುತ್ತೇನೆ;ಬೀಳುತ್ತೇನೆ
ಹತ್ತಿ ಹೋದವರು ಹಲವರು
ಮತ್ತೆ ನಾನು ಏಳುವ ಲಕ್ಷಣಗಳಿಲ್ಲ