ಮಳೆಯಲ್ಲಿ ತೊಯ್ದು ಬಿದ್ದ ರಾತ್ರಿ. ಕಿರಿದಾದ ರಸ್ತೆ. ರಸ್ತೆ ಅಕ್ಕಪಕ್ಕದಲ್ಲಿ ಮುರಿದು ಬಿದ್ದ ಮನೆ-ಮಠಗಳು. ಮುರಿದ ಮನೆಯ ಗೊಡೆಗಂಟಿಕೊಂಡೇ ಮಂದವಾಗಿ ಉರಿಯುತ್ತಿರುವ ದಾರಿ ದೀಪ. ಗೊಡೆಯಲ್ಲಿನ ಮೊಳೆಯಲ್ಲಿ ಜೋತು ಬಿದ್ದಿರುವ ಒಂದು ಚಿತ್ರ ; ಬಲು ವಿಚಿತ್ರ.
ಸುಖವಿದ್ದ ಕಣ್ಣುಗಳಿಗೆ ಆ ಚಿತ್ರ ಕಾಣುವುದೇ ಇಲ್ಲ.
ಮನಸ್ಸಿನೆಲ್ಲ ಮೂಲೆಗಳಲ್ಲೂ ಕತ್ತಲೆ ತುಂಬಿದ ಯುವಕ. ಕಂಗೆಟ್ಟ ಕಂಗಳ ಹಿಡಿದು ಆ ದಾರಿಯಾಗಿ ಬರುತ್ತಾನೆ. ತಡವರಿಸುತ್ತಾನೆ. ಬೀಳುತ್ತಾನೆ. ವಿಚಿತ್ರ ಲೋಕ. ಅವನನ್ನು ಯಾರೂ ಎತ್ತುವುದಿಲ್ಲ. ನೋಡಿಯೂ ನೋಡದ ಕಣ್ಣುಗಳು.
ಆ ಯುವಕನಿಗೊಂದು ಕೂಗು. ಆರ್ತನಾದ. ತಮಟೆಯಲ್ಲಿ ಕಾದ ಸೀಸ ಬಿಟ್ಟಂತ ಅನುಭವ. ಚಿತ್ರದಲ್ಲಿನ ಕೈ ಕರೆಯುತ್ತಿದೆ. ಬಳಿ ಸಾರುತ್ತಾನೆ. ದಿಟ್ಟಿಸುತ್ತಾನೆ ಅರೆ ಕ್ಷಣ. ತೆರೆದ ಬಾಯಿ, ಬೀಸಿದ ಬಾಹುಗಳು. ಪಕ್ಕದಲ್ಲಿ ಸಣ್ಣಗೆ ಉರಿಯುತ್ತಿರುವ ಹಣತೆ. ಅರ್ಥವಾಗದು. ಕಣ್ಣು ಮುಚ್ಚುತ್ತಾನೆ. ಕಣ್ಣ ತೆರೆಯುವುದರೊಳಗೆ ಮನಸಿನೊಳಗಣ ಅನಂತ ಸಂತೋಷ. ಲೋಕವನ್ನು ಗೆಲ್ಲಬಲ್ಲೆನೆಂಬ ಆತ್ಮ ವಿಶ್ವಾಸ. ಗುರಿಗಳೆಲ್ಲ ತನ್ನ ಬರುವಿಕಿಯ ನಿರೀಕ್ಷೆಯಲ್ಲಿನ ಭಾವ. ಸ್ವರ್ಗ ತನ್ನ ಕೈಯಲ್ಲಿದೆ . ಭಲೇ! ಎನ್ನುತ್ತಲೇ ಯುವಕ ಮುಂದಿನ ಹೆಜ್ಜೆಯಿಡುತ್ತಾನೆ.
ದಿಟ್ಟ ಹೆಜ್ಜೆ; ರಾಜ ಠೀವಿ. ಹಿಂತಿರುಗಿ ನೋಡದ ಕಣ್ಣುಗಳು.
ಚಿತ್ರದೊಳಗಿನ ಧ್ವನಿ ಆಕಾಶ ಮುಟ್ಟುವಂತೆ ರೋದಿಸುತ್ತದೆ. ಯುವಕನೀಗ ಕಿವುಡ.ಚಿತ್ರದ ಬಾಯಿ ಕೊಂಚ ಜಾಸ್ತಿಯೇ ತೆರೆಯುತ್ತಿದೆ. ಬೀಸಿದ ಬಾಹುಗಳೂ ಇನ್ನೂ ಅಗಲ. ಹಣತೆ ಜ್ಯೋತಿ ಕ್ಷೀಣಿಸುತ್ತಿದೆ.
ಕತ್ತಲು ತುಂಬಿದ ಮನಸ್ಸಿಗೆ ಚಿತ್ರ ಕಾಯುತ್ತಿದೆ. ಬೆಳಕ ಕೊಟ್ಟು ತಾನು ಬೆಳಗುವುದಕ್ಕೆ. ದೀಪ ಹಚ್ಚಿಸಿಕೊಂಡವರು ಚಿತ್ರದ ಹಣತೆ ಹಚ್ಚುವುದ ಮರೆಯುತ್ತಾರೆ. ಚಿತ್ರಪಟದ ಮನಸ್ಸು ನಿಧಾನವಾಗಿ ಇಲ್ಲವಾಗುತ್ತಿದೆ. ಚಿತ್ರಕಾರನ ಅರಣ್ಯ ರೋದನ.