Saturday, June 02, 2007

ಕೇಳೇ ನನ್ನವ್ವ

ಬೇಲಿ ಮ್ಯಾಲಿನ ಬಳ್ಳಿ
ಬಳ್ಳ್ಯೊಳು ಹೂ ಬೆಳ್ಳಿ
ಸಾಲಾಗಿ ಅರಳಿ ನಿಂತ್ಯಾವ, ನನ್ನವ್ವ
ಕೈಬೀಸಿ ನನ್ನ ಕರೆದಾವ

ಮಣ್ಣಿನ ಮಡಿಕೆಯು
ಬೆಣ್ಣಿಯ ಗಡಗಿಯು
ಬೆರಳಿಡಿದು ನನ್ನ ನಡೆಸ್ಯಾವ, ನನ್ನವ್ವ
ನನ್ ಕೂಡೆ ಭಾರಿ ನಗುತಾವ

ಅಂಕಣದ ಚಪ್ಪರ
ಹರಿದರಿದು ನೋಡ್ಯಾರ
ಚಂದಿರ,ನೂರು ಚುಕ್ಕಿಗಳು, ನನ್ನವ್ವ
ಮನದುಂಬಿ ನನ್ನ ಹರಸಾರ

ಬೆಟ್ಟದ ಮೇಲಿನ
ಕಟ್ಟೆಯ ಕರಿದೇವ
ಕರುಣೆಯ ಕಣ್ಣ ತೆರಕೊಂಡು, ನನ್ನವ್ವ
ಕಾದಾನೆ ನನ್ನ ಕೈಬಿಡದೆ

ಚಿಂತಿಮಾಡತಿ ಯಾಕ?
ನಗ್ತೀನಿ ಇರತನಕ
ಉಸಿರಾಗ ನಿನ್ನ ಹಾಡೈತಿ ,ನನ್ನವ್ವ
ಹಸಿರಾಗತೈತಿ ನನ ಬಾಳ