Tuesday, August 28, 2007

ತಿಳಿದಿರಲಿಲ್ಲ

ಸೆರಗಂಚಿನಿಂದ ಕಣ್ಣೀರ ಒರೆಸಿ
ನಿಮ್ಮ ಪಾದಗಳಿಗೊರಗುವಾಗ
ತಿಳಿದಿರಲಿಲ್ಲ ನನಗಂದು
ಕಡೆಯ ಪುಣ್ಯ ಸ್ಪರ್ಶವೆಂದು

ಮೆಲ್ಲನೆ ನೀವು ಹೊಸ್ತಿಲನು ದಾಟಿ
ಕದ ಹಿಡಿದು ಹಿಂತಿರುಗಿ ನೋಡುವಾಗ
ತಿಳಿದಿರಲಿಲ್ಲ ನನಗಂದು
ಕಡೆಯ ಹೊನ್ನ ದಿನವೆಂದು

ಪಂಚೆಯೆತ್ತಿ ಮೆಟ್ಟಿಲನು ಇಳಿಯುತ್ತ
ಅಂಗಳದ ರಂಗೋಲಿ ನೋಡುವಾಗ
ತಿಳಿದಿರಲಿಲ್ಲ ನನಗಂದು
ಬಣ್ಣದ ಕಡೆಯ ಮೆರುಗೆಂದು

ಮಲ್ಲಿಗೆ ಬಳ್ಳಿಯಿಂದಾರಿಸಿ
ಬಿರಿದ ಮೊಗ್ಗು ನೀವು ಮುಡಿಯಿಲ್ಲಿಡುವಾಗ
ತಿಳಿದಿರಲಿಲ್ಲ ನನಗಂದು
ಬಾಳ ಕಡೆಯ ಕಂಪೆಂದು

ಅಂಗಳವ ದಾಟಿ, ಕೇರಿಯ ದಾರಿಯಲ್ಲಿ
ನೀವು ನಡೆಯುತ್ತ, ತಿರುಗುವಾಗ
ತಿಳಿದಿರಲಿಲ್ಲ ನನಗಂದು
ನಿಮ್ಮ ಕಡೆಯ ನೋಟವೆಂದು