Wednesday, August 23, 2006

ಒಗಟುಗಳು-ಉತ್ತರ ಸಮೇತ

೧. ಕಾನಾಗೆ ಕಡ್ಲೆ ಬಿತ್ತಿ
ಗರಿ ಬೇಲಿ ಕಟ್ಟಿ
ರಾಮ ರಾಮ ಅನ್ನೊ ಹುಡುಗನ್ನ ಕಾವಲಿಗೆ ಬಿಟ್ಟಿದ್ರಂತೆ!
ಉತ್ತರ:ಕಣ್ಣು

೨. ಮೇಲಿನ ಮನೆ ಮುದುಕಿ
ಕೆಳಗಿನ ಮನೆ ಮುದುಕಿ
ಜಿಬ್ಬು ಜಿಬ್ಬಿನಲ್ಲಿ ಹೊಡೆದಾಡತಾರಂತೆ
(ಜಿಬ್ಬು = ಸಣ್ಣ ಕಟ್ಟಿಗೆ ಚೂರು )
ಉತ್ತರ: ಕಣ್ಣಿನ ರೆಪ್ಪೆಗಳು

೩. ಅಯ್ಯಪ್ಪನ ಕುದುರೆಗೆ ಮೈಯೆಲ್ಲಾ ಗಾಯ
ಉತ್ತರ: ಕೌದಿ ( ಬಟ್ಟೆ ಚೂರುಗಳಿಂದ ಹೊಲೆದು ಮಾಡಿರುವ ಹೊದಿಕೆ, ಚಾದರ)

೪. ಬಿಳಿ ಕುದುರೆ ಬೇಲಿ ಹಾರ್ತತಿ
ಉತ್ತರ:ಬೂದಿ

೫. ಗುದ್ದನಲ್ಲಿ ಇರೊ ಬಸಪ್ಪ
ಎದ್ದು ಎದ್ದು ನೋಡ್ತಾನ
(ಗುದ್ದು= ಹೊಂಡ )
ಉತ್ತರ: ಒಲೆಯಲ್ಲಿ ಒಡ್ಡಿರುವ ಬೆಂಕಿ

೬. ಆ ಕಲ್ಲು , ಈ ಕಲ್ಲು ನಡುವೆ ಮತ್ತೊಂದು ಕಲ್ಲು
ಆ ಕಲ್ಲು ಮುಳುಗಿದರೆ ಲೋಕವೆಲ್ಲ ಹಾಳು
ಉತ್ತರ: ಬೆಣ್ಣೆ

೭. ಬಿಳಿ ಗದ್ದೆ ಮೇಲೆ , ಕರಿ ಕಡ್ಲೆ ಬಿತ್ತಿ
ಬಾಯಗೆ ಒಂದೊಂದೆ ಆರಿಸಬೇಕು
ಉತ್ತರ:ಬಿಳಿ ಹಾಳೆ, ಕಪ್ಪು ಅಕ್ಷರಗಳು

೮ ಮಳೆ ಜಳ್ಳು
ಮಾಣಿಕ್ಯದ ಹರಳು
ಮಾತ ಸುಳ್ಳು
( ಒಂದೊಂದು ಸಾಲಿಗೆ ಒಂದೊಂದು ಉತ್ತರ)
ಉತ್ತರ:
ಇಬ್ಬನಿ
ಆಣೆಕಲ್ಲು
ಕನಸು


೯. ಕೊಕ್ಕರೆ ಕೂರ್ತತಿ
ಕೆರೆನೀರು ಆರ್ತತಿ
ಉತ್ತರ:
ಬತ್ತಿ
ಎಣ್ಣೆ


೧೦. ಬೆಳ್ಳಿ ಸರಪಳಿ ತೆಗೆಯೊಕೆ ಬರ್ತತಿ
ಹಾಕಕೆ ಬರೊಲ್ಲ
ಉತ್ತರ:
ಕರೆಯುತ್ತಿರುವ ಹಾಲು


೧೧ ಒಂದು ಅಂಗಳಕ್ಕೆ ಒಂದೇ ಕಂಬ
ಉತ್ತರ:
ಛತ್ರಿ

ಉತ್ತರಗಳಿಗೆ ವಿವರಣೆ ಬೇಕಿದ್ದಲ್ಲಿ ನನಗೆ ತಿಳಿಸಿ :)

Tuesday, August 01, 2006

ಶಾಲ್ಮಲಿ

ಪ್ರೀತಿಯ ಸಾಧನಾ,

ಹೇಗಿದ್ದಿಯಾ? ನಾನಿಲ್ಲಿ ಆರಾಮವಾಗಿದ್ದೇನೆ. ನಿಂಗೆ ಪತ್ರ ಬರಿದೆ ಇದ್ದುದಕ್ಕೆ ಸಾರಿ. ಪಾಪು ನೋಡ್ಕೊಳೊದ್ರಲ್ಲೆ ಸಮಯ ಆಗಿ ಹೋಗುತ್ತೆ.
ನಿಂಗೆ ಗೊತ್ತಲ್ಲ .ಜೀವನ್ ಕಥೆ. ೨-೩ ತಿಂಗಳಿಂದ ಮನೆಗೆ ಬಂದಿರ್ಲಿಲ್ಲ. ನನ್ನ ಜೀವನದಲ್ಲಿ ಎಲ್ಲ ಮುಗಿದು ಹೋಯ್ತು ಅಂತ ಅಳೋದು ಒಂದೆ ಆಗಿತ್ತು. ಮನೆಲಿ ಯಾರು ಮಾತೆ ಆಡ್ತಿರ್ಲಿಲ್ಲ. ಸ್ಮಶಾನ ಮೌನ. ನಾನಂತು ಹಾಸಿಗೆ ಮೇಲೆ, ಚಾದರದ ಒಳಗೆ ಲೋಕ ಮಾಡ್ಕೂಂಡು ಅಳೋದನ್ನ ಆಸ್ತಿ ಮಾಡ್ಕೊಂಡಿದ್ದೆ. ಅಲ್ಲಿ ಇಲ್ಲಿ ಸ್ವಲ್ಪ ಧೈರ್ಯ ಮಾಡಿ ಜೀವನ ನಡಿತಿತ್ತು ಅದರ ಪಾಡಿಗೆ ಅದು. ಒಂದು ದಿನ ಮಾವ ಬಂದು ನನ್ನ ಮುಂದೆ ಗೊಳೊ ಅಂತ ಅತ್ರು. 'ಶಾಲು, ನಿನ್ನ ಜೀವನ ಅಮವಾಸ್ಯೆ ಆಗಿ ಹೊಯ್ತಲ್ಲ, ನನ್ನ ಮಗ ಬೇಕಾ ಬಿಟ್ಟಿ ಏನೇನೊ ಅಭ್ಯಾಸ ಮಾಡ್ಕೊಂಡ' ಅಂದ್ರು. ಅದೆಲ್ಲಿ ಧೈರ್ಯ ಬಂತೊ ಗೊತ್ತಿಲ್ಲ ಸಾಧು,ಪಾಪುನ ಕರ್ಕೊಂಡು ಬಂದು, ಅವರ ಕೈಯಲ್ಲಿ ಹಾಕಿ, ' ಮಾವ, ಪೂರ್ಣ ಚಂದ್ರ ಇದ್ದಾಗ, ಅಮವಾಸ್ಯೆ ಎಲ್ಲಿ ಅಂದೆ, ಮಾವ, ನಾವು ಜೀವನನ ಇಷ್ಟೇನಾ ಕಂಡಿರೋದು....ಬದುಕ ಬೇಕು, ನಮ್ಮ ಆದ್ಯತೆಗಳನ್ನ ನಾವೇ ಮಾಡ್ಕೊಬೇಕು ಅಂದೆ' ಅವ್ರು ಅದಕ್ಕೆ, ನಂದೇನಿದೆ!! ೬೦ ಆಯ್ತಲ್ಲ ...ಅರಳು ಮರಳು ಅಂದ್ರು. ನಾನು ' ೬೦- ಅರಳು, ಮರಳು ಅಲ್ಲ...೬೦ಕ್ಕೆ ಮರಳಿ ಅರಳು ಅಂದೆ' . 'ಏನಿದು, ನನ್ನ ಮಗಳು ಇವತ್ತು ಬುದ್ಧಿವಂತೆ ಆಗಿದ್ದಾಳೆ' ಅಂದ್ರು. ನಾನು ' ನಮ್ಮ ಬೇಂದ್ರೆ ಮಾಸ್ತರ್ದು' ಅಂದೆ. ಅವತ್ತಿಂದ ನಾವು ಹೊಸ ಜೀವನ ಶುರು ಮಾಡಿದ್ದೀವಿ.

ಮಾವ ಮತ್ತೆ ಕೆಲ್ಸಕ್ಕೆ ಸೇರಿಕೊಂಡಿದ್ದಾರೆ. ಅತ್ತೆ ಸುಧಾರಿಸಿ ಕೊಂಡಿದ್ದಾರೆ. ನಾನು ಕೆಲ್ಸಕ್ಕೆ ಹೋಗ್ತಿದ್ದೀನಿ. ಮಾವಯ್ಯಂಗೆ ಬೇಂದ್ರೆ ಮಾಸ್ತರ ಹುಚ್ಚು ಈಗ. ಮೊನ್ನೆ ' ನಾಕು ತಂತಿ' ಪುಸ್ತಕ ತಂದು ಕೊಟ್ಟೆ. ತುಂಬಾ ಅತ್ರು. ನೀನೆ ನನ್ನ ಮಗ ಅಂತ.

ಹೇಗಿದ್ದಾರೆ ನಿಮ್ಮ ಮನೆಯವ್ರು? ಇನ್ನ ಹರುಕು ಮುರುಕು ಕನ್ನಡ ಮಾತಡ್ತಾರ? ಸರಿಯಾಗಿ ಕಲ್ಸು ಅವ್ರಿಗೆ. ಊರಿಗೆ ಬಾ ಮಾರಾಯ್ತಿ. ಪತ್ರ ಬರಿ.
ಸರಿ ಸರಿ, ನನ್ನ ಹಾಡು ಬರ್ತ ಇದೆ ರೇಡಿಯೋದಲ್ಲಿ ಬೇಂದ್ರೆ ಮಾಸ್ತರ್ದು. ಸಿಗ್ತೀನಿ ಟಾಟಾ

ಶಾಲು