'ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ' ಈ ಹಾಡು ಕೇಳ್ದಾಗೆಲ್ಲ ನೆನಪಾಗೊದು ನಮ್ಮ ಅಮ್ಮನ ಊರು. ಶಿರಸಿಯಿಂದ ಸ್ವಲ್ಪವೇ ದೂರದಲ್ಲಿದೆ ಈ ಊರು. ಹಳ್ಳಿ ಅಂತಾನೇ ಹೇಳ್ಬೇಕು. ಮಲೆನಾಡ ಮಡಿಲಲ್ಲಿ ಪುಟ್ಟದಾದ ಊರು.ನಾನು ಅಜ್ಜನ ಮನೆಗೆ( ತಾಯಿಯ ತಂದೆಯನ್ನೂ ನಾವು ಅಜ್ಜ ಅಂತೀವಿ, ತಾತ ಅನ್ನೋ ರೂಢಿ ಇಲ್ಲ) ಬೇಸಿಗೆ ರಜೆ, ಅಕ್ಟೋಬರ ರಜೆಗೆಂದು ಹೋಗುತ್ತಿದ್ದೆವು. ವಿಶೇಷ ಅಂದರೆ, ಆ ಊರಿಗೆ ಒಬ್ಬ ಬಳೆಗಾರನಿದ್ದ. ಏಲ್ಲಿಂದ ಬರುತ್ತಿದ್ದನೋ, ಯಾವೂರಿಗೆ ಹೋಗುತ್ತಿದ್ದನೋ ನಂಗೆ ಗೊತ್ತಿಲ್ಲ. ಬಳೆಗಾರ ಬಂದ ಅನ್ನೋ ವಿಷಯ ಮಾತ್ರ ನಿಮಿಷದಲ್ಲಿ ಊರವರಿಗೆಲ್ಲ ಗೊತ್ತಾಗ್ತಿತ್ತು. ಶಿರ್ಸಿ ಹತ್ರ ಇದ್ರೂ , ಜನ ಬಳೆಗಾರ ಊರಿಗೆ ಬಂದ ಅಂದ್ರೆ ಅದ್ಯಾಕೋ ಸಂಭ್ರಮ ಪಡೋರು. ನಮ್ಮ ಅಜ್ಜನ ಮನೆಯ ಅಂಗಳ ದೊಡ್ಡದಾಗಿತ್ತು. ಚಪ್ಪರ ಹಾಕಿರ್ತಿತ್ತು. ಬಳೆಗಾರ ಬಂದ ದಿನ, ಹಳ್ಳಿ ಹೆಂಗಳೆಯರೆಲ್ಲ ಅಜ್ಜನ ಮನೆ ಅಂಗಳದಲ್ಲಿ. ಚಾಪೆ ಹಾಸಿ ಹಾಗೆ ಎಲ್ಲರೂ ಕುಳಿತು ಕೊಳ್ತಾ ಇದ್ದರು. 'ಅಮ್ಮ, ನಂಗೆ ಆ ಹಸಿರ್ ಚಿಕ್ಕಿ (ಚುಕ್ಕಿ)ಬಳಿ ಬೇಕು, ನಂಗೆ ಮಣ್ಣಿನ ಬಳಿ ಬೇಕು' ಅನ್ನೋರು. ( ಗಾಜಿನ ಬಳೆಗೆ ಮಣ್ಣಿನ ಬಳಿ ಅಂತಿದ್ರು, ನಮ್ಮ ಅಮ್ಮ ಕೂಡ ಹಾಗೆ ಅಂತಾರೆ ಈಗಲೂ). ಬಳೆಗಾರ ಸುಮ್ನೆ ಬಳೆ ಕೊಡ್ತಿರ್ಲಿಲ್ಲ. ಹಾಡ ಹಾಡ್ಬೇಕು ಅವ್ನ ಎದಿರ ಕೂಂತು. ಬರಂಗಿಲ್ಲ ಅಂದ್ರ ಬಿಡಂಗಿಲ್ಲ. ನಮ್ಮ ಸೋದರ ಅತ್ತೆ ಮುಂದಾಗೊವ್ರು. 'ತೊಡಿಸೆ ,ಗರತಿ ಗಂಗವ್ವಂಗೆ ಹಸಿರ ಚಿಕ್ಕಿಯ ಬಳಿ' ಹೀಗೆ ಏನೆನೋ ಹಾಡಿದ ಮೇಲೆ ಬಳೆ ಇಡೊಕ್ ಶುರು ಮಾಡೊವ್ನು. ಹಾಡಿನ ಸುರಿಮಳಿ ಆಗೋದು. ನಾಚ್ಕೊಂಡು ಹಾಡು ಶುರು ಮಾಡಿದ್ರ ನಿಲ್ಲಿಸ್ತಾನೆ ಇರ್ಲಿಲ್ಲ.
ಮದುವೆ ಎನಾದ್ರು ಇದ್ರೆ, ಬಳೆಗಾರಂಗೆ ಬರ ಹೇಳ್ತಿದ್ರು. ಮೊದಲು, ಆಸರಿಗೆ ಕೊಟ್ಟು ( ಆಸರು= ಬಂದವರಿಗೆ ದಣಿವಾರಿಸಲು ಕೊಡುತ್ತಿದ್ದ ನೀರೊ, ಪಾನಕನೊ, ಎನೋ ಒಂದು) ಮದುಮಗಳಿಗೆ ಬಳೆ ಇಡೋ ಶಾಸ್ತ್ರ ಮಾಡಿಸುತ್ತಿದ್ದರು. ಪದಗಳು, ಕಿಲ ಕಿಲ ನಗು, ಮದುಮಗಳ ಜೊತೆ ತಾವು ಬಳೆ ಇಟ್ಕೊಳ್ತೇವೆಂದು ಹಟ ಮಾಡೊ ಮಕ್ಕಳು, ಅದನ್ನ ನೋಡೋದೆ ಚಂದ. ಹಾಗೆ ಬಳೆ ತೊಡಿಸ್ತ, ಅಲ್ಲಿರುವ ಎಲ್ಲರನ್ನು ಮಾತಡಸ್ತ, ನಗಿಸ್ತಿದ್ದ ಬಳೆಗಾರ. ಬಳೆಗಾರನಿಗೆ ಊಟ ಹಾಕಿ, ಅಕ್ಕಿ, ಬೆಲ್ಲ, ಕವಳ( ಎಲೆ, ಅಡಿಕೆ) ಕೊಟ್ಟು ಕಳುಹಿಸುವುದು ಒಂದು ವಾಡಿಕೆ.
ಅಜ್ಜನ ಊರಲ್ಲಿ, ಬಳೆಗಾರ ಕೇವಲ ಬಳೆಗಾರನಲ್ಲ, ಅಲ್ಲಿನ ಹೆಂಗಳೆಯರ ಅಣ್ಣನಾಗಿದ್ದ. ಕಷ್ಟ ಸುಖಗಳನ್ನ ಕಿವಿಗೊಟ್ಟು ಕೇಳುತ್ತಿದ್ದ. ಸಮಾಧಾನ ಮಾಡ್ತಿದ್ದ. ಹಾಡು ಹಾಡಿಸ್ತಿದ್ದ.
ಆದರೆ, ಈಗ ಅಲ್ಲಿಯ ಪರಿಸರವೂ ಬದಲಾಗಿದೆ. ಹಾಡು ಕೇಳಿ ಬರುವುದು ಮದುವೆಯಲ್ಲಿ ಮಾತ್ರ. ಬಳೆಗಾರ ಬರ್ತಾನೋ, ಇಲ್ಲವೋ ನಂಗೆ ತಿಳಿದಿಲ್ಲ. ಇತ್ತೀಚಿನ ದಿನಗಳಲ್ಲಿ ನಾನಂತೂ ಅಜ್ಜನ ಮನೆಗೆ ಹೋಗಿಲ್ಲ. ಬಳೆಗಾರನ ವಿಷಯವೂ ತಿಳಿದಿಲ್ಲ.
ಆದರೆ, ಆಗಿನ ಜಗತ್ತೆ ಸುಂದರ ಅಂತ ನಂಗೆ ಅನ್ನಿಸುತ್ತೆ. ಸುಮ್ಮನೆ ಅಲ್ಲ ಹೇಳೋದು....ಭಾಗ್ಯದ ಬಳೆಗಾರ...............
ಸಿರ್ಸಿ ನೆನಪಾಗ್ತ ಇದೆ. :(
Monday, July 17, 2006
Subscribe to:
Posts (Atom)