Showing posts with label ಹನಿಗಳು. Show all posts
Showing posts with label ಹನಿಗಳು. Show all posts

Monday, May 05, 2008

ಹನಿಗಳು-೪

ಕಡಲ ದಡದ ಹುಡುಗಿಯದು ಒಡೆಯದ ಮೌನ
ಕಡಲ ಒಡಲೊಳಗಿಂದ ಗುಡುಗಿ ಸಿಡಿವ ಅಲೆಗಳು
ನಿಲ್ಲದ ಸೆಣಸಾಟ
ಅವಳದು ದಿಟ್ಟ ನೋಟ, ಅಲುಗದ ತುಟಿ
ಕಡಲ ತೆರೆಗಳದು ತಾಂಡವ ನೃತ್ಯ
ಬಹಳ ಹೊತ್ತಿನ ತನಕ
ಈಗ ಎಲ್ಲವೂ ಸ್ತಬ್ಧ; ನಿಶ್ಯಬ್ದ
ಸಾಗರವೇ ಸಂಧಾನಕ್ಕೆ ಬಂದಂತೆ

*********************

ಮಂದ ಬೆಳಕಿನ ಬೀದಿ ದೀಪಗಳಲ್ಲಿ
ನಾ ಕೇರಿಗಳನ್ನ ದಾಟುವಾಗ
ಮಿಂಚಂತೆ ಮುಂದೆ ಬರಬೇಡ ಮಾರಾಯ್ತಿ
ಕಣ್ಣು ಕುಕ್ಕಿ,ಆಯ ತಪ್ಪಿ, ಬಿದ್ದು ಬಿಡುತ್ತೇನೆ
ಜನ ನನ್ನ ಕುಡುಕನೆನ್ನುತ್ತಾರೆ

Monday, March 31, 2008

ಹನಿಗಳು- ೩

ಕತ್ತಲೆಯ ಎಲ್ಲೆಯ
ಹುಡುಕಲು
ಒಂದೆಳೆಯ ಬೆಳಕು
ಕಡಕ್ಕೆ ಬೇಕಿದೆ

***************

ರಾತ್ರಿಗಳಲ್ಲಿ ಕನಸಿನದು
ಮುಗಿಯದ ತಗಾದೆ
ನಿದ್ರೆಯಿಲ್ಲ ನನಗೆ
ಹಗಲಿನಲಿ ಕನಸಿಗೆ
ಭರ್ಜರಿ ನಿದ್ರೆ !

***************

ಲಕ್ಷ ಲಕ್ಷ ಚುಕ್ಕಿ
ಹಾಲುಹುಣ್ಣಿಮೆಯ ಚಂದಿರ
ಊಹೂಂ ಹಗಲಾಗುವುದಿಲ್ಲ
ಸೂರ್ಯನಿಲ್ಲವಲ್ಲ

***************

ಮನಸಿನೊಳಗಿನ
ಕಿರುಹಣತೆಗೆ
ಹೊರಗಿನ ಕತ್ತಲೂ
ಹೆದರಿ ಅಳುತ್ತಿದೆ

( ಹೊಸತಾಗಿ ಏನೂ ಬರೆಯಲಾಗುತ್ತಿಲ್ಲ.ಇವೆಲ್ಲ ಹಳೆಯ ಹನಿಗಳು. )

Saturday, February 23, 2008

ಹನಿಗಳು - ೨

ನಿನ್ನ ಕಿರುನಗೆಯಿಂದ
ನನ್ನೀ ಎದೆಯೊಳಗೆ
ಕನಸುಗಳ ದೀಪಾವಳಿ
************************
ಒಲವಿನ ಹಣತೆಯನ್ನು
ಎದೆಯೊಳಗೆ ಹೊತ್ತಿಸಿಟ್ಟಿದ್ದೆ
ಹಣತೆ ವಾಲಿ, ಹೃದಯ ಹೊತ್ತಿ
ಈಗ ಬರಿಯ ಬೂದಿ
************************
ನನ್ನವರೆಲ್ಲ ಜೊತೆಯಲ್ಲೇ
ನಡೆಯುತ್ತಿದ್ದಾರೆ
ನನ್ನ ದಾರಿಗೂ, ಅವರ ದಾರಿಗೂ
ಸಮಾನಾಂತರ!
************************
ಹೆಜ್ಜೆಗುರುತ ಹಿಡಿದು
ಹಿಂದೆ ಬರುತ್ತಿದ್ದವಳನ್ನು
ನೋಡಿ ನಕ್ಕು
ಗಾಳಿಯಲ್ಲಿ ತೇಲಿಹೋದ

Thursday, December 13, 2007

ಹಳೆಯ ಹನಿಗಳು

ಕಾರಣವಿಲ್ಲದೆ
ಮುಖ ತಿರುಗಿಸಿ ಹೋದವಳ
ಹಿಂದೆ ಹೋಗಲು
ಕಾರಣ ಹುಡುಕುತ್ತಿದ್ದೇನೆ

~~~*~~~

ಚಂದ್ರನ ಮೊಗವ ನೋಡಲು
ನನ್ನ ಚಂದ್ರಮುಖಿ ಕಣ್ಣೆತ್ತಲು
ಚಂದ್ರ ಅವಳ ಕಣ್ಮಿಂಚಿಗೆ ನಾಚಿ
ಮೋಡಗಳ ಸೆರಗು ಎಳೆದುಕೊಂಡ

~~~*~~~

ನಾನೇ ಕಟ್ಟಿಕೊಂಡ
ವರ್ತುಲ ಬೇಲಿಯಲ್ಲಿ
ಮೂಲೆಗಳನ್ನ ಹುಡುಕುತ್ತಿದ್ದೇನೆ
ಅವಿತುಕೊಳ್ಳಲು

~~~*~~~
ಅವಳು ಒಂದೇ ಸಮನೆ
ಬಿಕ್ಕುತ್ತಿದ್ದಳು; ಕಾರಣರ್ಯಾರೋ?
ಜಾರುವ ಆ ಕಣ್ಣ ಹನಿಗಳಲ್ಲಿ
ನನ್ನದೇ ಮುಖವಿತ್ತು

(ಕೊನೆಯ ಹನಿಯ ಪದಜೋಡಣೆಯನ್ನು ಸರಿಪಡಿಸಿದ ಸ್ನೇಹಿತನಿಗೆ ಹೃತ್ಪೂರ್ವಕ ವಂದನೆಗಳು)